ಕನ್ನಡಪ್ರಭ ವಾರ್ತೆ, ಮಂಡ್ಯ

ಮಹಿಳಾ ಸಬಲೀಕರಣಕ್ಕೆ ಪೂರಕವಾಗುವಂತಹ ಹಲವು ವಿಶೇಷತೆಗಳನ್ನು ಜಿಲ್ಲೆಗೆ ಪರಿಚಯಿಸುವ ಮೂಲಕ ಗಮನಸೆಳೆದಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಸ್ತಬ್ಧ ಚಿತ್ರದಲ್ಲೂ ಸ್ತ್ರೀ ಶಕ್ತಿ ಮೇಲುಗೈ ಸಾಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಾತೃತ್ವ ಮತ್ತು ಮಾತೃ ವಾತ್ಸಲ್ಯವನ್ನು ಸ್ತಬ್ಧ ಚಿತ್ರದಲ್ಲಿ ಪ್ರಧಾನವಾಗಿ ಬಿಂಬಿಸುವುದರೊಂದಿಗೆ ಮೈಸೂರು ದಸರಾ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿದ ಸ್ತಬ್ಧ ಚಿತ್ರಕ್ಕೆ ಜನಸಮೂಹದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುವಂತೆ ಮಾಡಿದ್ದಾರೆ. ಜನಮೆಚ್ಚುಗೆ ಗಳಿಸಿರುವ ಈ ಸ್ತಬ್ಧ ಚಿತ್ರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ವೈಯಕ್ತಿಕವಾಗಿ ಒಂದು ಲಕ್ಷ ರು. ಬಹುಮಾನ ಘೋಷಿಸಿರುವುದು ಮತ್ತೊಂದು ವಿಶೇಷವಾಗಿದೆ.

ಮೈಸೂರು ದಸರಾದಲ್ಲಿ ರಾಜ್ಯದ ಹದಿನಾರು ಜಿಲ್ಲೆಗಳಿಗಷ್ಟೇ ಸ್ತಬ್ಧಚಿತ್ರ ತಯಾರಿಸುವ ಅವಕಾಶ ದೊರಕಿತ್ತು. ಅದರಲ್ಲಿ ಮಂಡ್ಯ ಜಿಲ್ಲೆಯೂ ಸೇರಿತ್ತು. ಸಿಕ್ಕ ಅವಕಾಶವನ್ನು ಸಮಯೋಚಿತವಾಗಿ ಬಳಸಿಕೊಂಡು ನಾರಿ ಶಕ್ತಿಯನ್ನು ಅನಾವರಣಗೊಳಿಸುವ ಪರಿಕಲ್ಪನೆಗೆ ಸಿಇಓ ಕೆ.ಆರ್.ನಂದಿನಿ ಮುಂದಾದರು. ಅದಕ್ಕೆ ಅಸ್ಮಿತೆ-ಸ್ತ್ರೀಶಕ್ತಿ ಅನಾವರಣ ಎಂಬ ಶೀರ್ಷಿಕೆಯನ್ನು ಕೊಟ್ಟರು.

ಮಾತೃತ್ವ, ವಾತ್ಸಲ್ಯ, ಮಮತೆ ಇವು ಬೆಲೆಕಟ್ಟಲಾಗದ ಸಂಬಂಧಗಳು. ತಾಯಿ ಮಮತೆಯನ್ನು ಪ್ರತಿಬಿಂಬಿಸುವಂತಹ ತಾಯಿ-ಮಗುವಿನ ಸ್ತಬ್ಧ ಚಿತ್ರ ಆಕರ್ಷಣೀಯವಾಗಿ ಮೂಡಿಬಂದಿತ್ತು. ಯುಗ ಯುಗಗಳೇ ಕಳೆದರೂ ಈ ತಾಯಿ ಮಮತೆ ಎಂದಿಗೂ ಬದಲಾಗುವುದಿಲ್ಲವೆಂಬ ಸಂದೇಶವನ್ನು ಸ್ತಬ್ಧ ಚಿತ್ರ ಸಾರಿ ಹೇಳುವಂತಿತ್ತು. ಭಾವನಾತ್ಮಕವಾಗಿ ಸ್ತಬ್ಧಚಿತ್ರ ಎಲ್ಲರನ್ನೂ ಆಕರ್ಷಿಸಿತು.


ಇದಲ್ಲದೆ ೨೦೨೫ರ ಅಂಧ ಮಹಿಳೆಯರ ಟಿ-೨೦ ವಿಶ್ವಕಪ್ ಗೆದ್ದ ಭಾರತದ ಕಲ್ಪನೆಯ ಟ್ಯಾಬ್ಲೋ ಕೂಡ ಈ ಸ್ತಬ್ಧ ಚಿತ್ರದಲ್ಲೇ ಮೂಡಿಸಲಾಗಿತ್ತು. ಇದು ಮಹಿಳೆಯರಿಗಿರುವ ಅಸಾಮಾನ್ಯ ಶಕ್ತಿಯ ಧ್ಯೋತಕದಂತೆ ಕಂಡುಬಂದಿತು. ಕೃಷಿಯಲ್ಲಿ ಡ್ರೋನ್ ಮತ್ತು ಕೃತಕ ಬುದ್ಧಿಮತ್ತೆ ಬಳಕೆ, ಸಮಗ್ರ ಕೃಷಿಯ ಮೂಲಕ ಮಹಿಳಾ ರೈತರು ನಾವೀನ್ಯತೆಗೆ ತೆರೆದುಕೊಂಡಿರುವುದನ್ನು ಇಲ್ಲಿ ಬಿಂಬಿಸಲಾಗಿದೆ. ಅನಾದಿಕಾಲದಿಂದಲೂ ಮಹಿಳೆ ವಿಶ್ವದ ಆರ್ಥಿಕತೆಗೆ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದ್ದಾಳೆ. ನಮ್ಮ ಮಹಿಳೆಯರು ಕೃಷಿ, ಪಶುಸಂಗೋಪನೆಯಂತಹ ಪ್ರಾಥಮಿಕ ವಲಯದಿಂದ ಹಿಡಿದು ಸಣ್ಣ ಮತ್ತು ಬೃಹತ್ ಉದ್ಯಮಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಉದ್ಯಮಶೀಲರಾಗಿ ಗಮನಸೆಳೆದಿದ್ದಾರೆ. ಸ್ವಸಹಾಯ ಸಂಘಗಳ ಮಹಿಳೆಯರಿಂದ ಮೌಲ್ಯವರ್ಧನೆ, ಬ್ರಾಂಡಿಂಗ್ ಹಾಗೂ ಅಕ್ಕ ಕೆಫೆ’ಯಂತಹ ಉಪಕ್ರಮಗಳ ಮೂಲಕ ಸೇವಾ ಕ್ಷೇತ್ರದಲ್ಲಿಯೂ ಸಹ ಆರ್ಥಿಕ ಸ್ವಾವಲಂಬನೆ ಸಾಧಿಸಿರುವುದನ್ನು ಸ್ತಬ್ಧ ಚಿತ್ರ ಪ್ರತಿಬಿಂಬಿಸುತ್ತಿತ್ತು.