ಕಿತ್ತೂರು ಹೋರಾಟದ ಅಮರ ಚರಿತ್ರೆ ಅನನ್ಯ: ಪಿ.ಗೋವಿಂದರಾಜು

| Published : Oct 09 2024, 01:45 AM IST

ಸಾರಾಂಶ

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಲ್ಲಿ ವಿಜಯಗಳಿಸಿ, 200 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಿತ್ತೂರು ರಾಣಿ ಚೆನ್ನಮ್ಮ ವಿಜಯಯಾತ್ರೆ ನಡೆಯುತ್ತಿದೆ. 1824 ಅಕ್ಟೋಬರ್ 23 ಕಿತ್ತೂರು ರಾಣಿ ಚೆನ್ನಮ್ಮ ಸೈನ್ಯದೊಂದಿಗೆ ಕಿತ್ತೂರು ಕೋಟೆಯ ಹೊರಗೆ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಸೋಲಿಸಿದ ದಿನವಾಗಿದೆ. ಇದು ಬ್ರಿಟಿಷರ ವಿರುದ್ದ ಮೊದಲ ಮಹಿಳಾ ಹೋರಾಟಗಾರ್ತಿಗೆ ದೊರೆತ ವಿಜಯವಾಗಿದೆ .

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥ ಮಂಗಳವಾರ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿತು. ದೊಡ್ಡಬಳ್ಳಾಪುರ ತಾಪಂ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ ಜ್ಯೋತಿ ರಥವನ್ನು ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು. ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥಕ್ಕೆ ಶಾಸಕ ಧೀರಜ್ ಮುನಿರಾಜು, ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾಪಂ ಇಒ ಎನ್.ಮುನಿರಾಜು, ನಗರಸಭೆ ಪೌರಾಯುಕ್ತ. ಕಾರ್ತಿಕ್ ಈಶ್ವರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮೊದಲಾದವರು ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಲ್ಲಿ ವಿಜಯಗಳಿಸಿ, 200 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಿತ್ತೂರು ರಾಣಿ ಚೆನ್ನಮ್ಮ ವಿಜಯಯಾತ್ರೆ ನಡೆಯುತ್ತಿದೆ. 1824 ಅಕ್ಟೋಬರ್ 23 ಕಿತ್ತೂರು ರಾಣಿ ಚೆನ್ನಮ್ಮ ಸೈನ್ಯದೊಂದಿಗೆ ಕಿತ್ತೂರು ಕೋಟೆಯ ಹೊರಗೆ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಸೋಲಿಸಿದ ದಿನವಾಗಿದೆ. ಇದು ಬ್ರಿಟಿಷರ ವಿರುದ್ದ ಮೊದಲ ಮಹಿಳಾ ಹೋರಾಟಗಾರ್ತಿಗೆ ದೊರೆತ ವಿಜಯವಾಗಿದೆ ಎಂದರು.

1857 ರಲ್ಲಿ ನಡೆದ ಸಿಪಾಯಿ ದಂಗೆಗೂ ಮೊದಲೇ 1824 ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ, ಗೆಲುವು ಸಾಧಿಸಿದ ಕಿತ್ತೂರು ರಾಣಿ ಚೆನ್ನಮ್ಮನ ಧೀರತ್ವ ಮತ್ತು ದೇಶಪ್ರೇಮ, ದಕ್ಷ ಆಡಳಿತ ವಿಧಾನ ಎಲ್ಲರಿಗೂ ಆದರ್ಶಪ್ರಾಯ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರಿಗೆ ತೆರಿಗೆ ಕೊಡುವುದಿಲ್ಲ ಎಂದು ಹೇಳುವ ಮೂಲಕ ಸ್ವಾಭಿಮಾನ ಪ್ರದರ್ಶನ ಮಾಡಿದರು. ಸಂಗೊಳ್ಳಿ ರಾಯಣ್ಣನಂತಹ ಸ್ವಾತಂತ್ರ್ಯ ಸೇನಾನಿ ಕಿತ್ತೂರು ರಾಣಿ ಚೆನ್ನಮ್ಮನ ರಾಜ್ಯದಲ್ಲಿ ಇದ್ದರು. ಮಹಿಳೆಯರು ಘನತೆ ಮತ್ತು ನ್ಯಾಯವನ್ನು ಕಾಪಾಡುವುದರಲ್ಲಿ ಮುಂಚೂಣಿಯಲ್ಲಿರಬಹುದು ಎಂಬುದನ್ನು ತೋರಿಸಿಕೊಟ್ಟರು. ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ ದೇಶದ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಇಂತಹ ವೀರ ಮಹಿಳೆಯ ನೆನಪಿನಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಪ್ರತಿವರ್ಷ ಕಿತ್ತೂರು ಉತ್ಸವ ನಡೆಯುತ್ತದೆ. ಈ ವರ್ಷ ಕಿತ್ತೂರು ವಿಜಯಕ್ಕೆ 200 ವರ್ಷಗಳಾಗಿರುವ ಪ್ರ ಯುಕ್ತ ಅಕ್ಟೋಬರ್ 23, 24, 25ರಂದು ಕಿತ್ತೂರಿನಲ್ಲಿ ವಿಜಯೋತ್ಸವ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಸಫೀರ್, ಕಾಡನೂರು ಗ್ರಾಪಂ ಅಧ್ಯಕ್ಷ ಮಧುಸೂದನ್, ಸಾಸಲು ಗ್ರಾಪಂ ಸದಸ್ಯ ಪ್ರಸನ್ನಕುಮಾರ್, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ದೊಡ್ಡಬಳ್ಳಾಪುರದಿಂದ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿಗೆ ಕಳುಹಿಸಿ ಕೊಡಲಾಯಿತು.