ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪೋಷಕರು ನಡೆದುಕೊಳ್ಳುವ ರೀತಿ ಹಾಗೂ ಜೀವನಶೈಲಿಯು ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ಮತ್ತು ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತವೆ ಎಂದು ಮಾನಸ ನರ್ಸಿಂಗ್ ಹೋಂ ಹಿರಿಯ ಸಲಹೆಗಾರತಿ ಡಾ.ವಿದ್ಯಾ ರಘುದತ್ ಜವಳಿ ಹೇಳಿದರು.ಇಲ್ಲಿನ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ಮೇಲೆ ಪೋಷಕರ ಪ್ರಭಾವ ಕುರಿತು ಮಾತನಾಡಿ, ಮಕ್ಕಳು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಹೊರಗಿನ ಪ್ರಪಂಚ ಹಾಗೂ ತಾಯಿ ಮಾನಸಿಕ ಸ್ಥಿತಿಗೆ ಅನುಗುಣವಾಗಿ ಬೆಳೆದು ನಂತರ ಮೂರನೇ ಒಂದು ಭಾಗದಷ್ಟು ಅನುವಂಶೀಯ ನಡೆ ನಡಾವಳಿ ಹಾಗೂ ಮೂರನೇ ಒಂದು ಭಾಗದಷ್ಟು ಪೋಷಕರ ನಡೆ ನುಡಿಗಳು ಹಾಗೂ ಮಕ್ಕಳ ಅಂದಿನ ಒಡನಾಟ ಮತ್ತು ಸಂಬಂಧಗಳ ಬಗ್ಗೆ ಪೂರಕವಾಗಿ ವಿಕಸಿತ ಹೊಂದುತ್ತವೆ ಎಂದು ತಿಳಿಸಿದರು.
ಸುತ್ತಮುತ್ತಲ ಪರಿಸರ, ಜ್ಞಾನ, ಗೆಳೆಯರು ಹಾಗೂ ನೆರಯವರಿಯವರಿಂದ ಇನ್ನುಳಿದ ಮೂರನೇ ಒಂದು ಭಾಗದಷ್ಟು ವಿಕಸಿತ ಮನಸ್ಥಿತಿ ಹೊಂದುತ್ತಾರೆ. ಜೀವನದ ವಿವಿಧ ಸ್ತರಗಳಲ್ಲಿ ವಿವಿಧ ರೀತಿಯ ಕೌಶಲ್ಯ ಅಳವಡಿಸಿಕೊಳ್ಳುವುದರ ಮೂಲಕ ಸಂಪೂರ್ಣ ಮಾನಸಿಕ ಹಾಗೂ ದೈಹಿಕ ಅಭಿವೃದ್ಧಿ ಸಾಧ್ಯ ಎಂದರು.ಉತ್ತಮ ಪರಿಸರವು ಮಕ್ಕಳ ಉತ್ತಮ ಮನಸ್ಥಿತಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಉತ್ತಮ ನಡವಳಿಕೆಗೆ ದಾರಿ ಮಾಡಿಕೊಡುತ್ತದೆ. ಕಾಲಕ್ಕೆ ತಕ್ಕಂತೆ ಬದಲಾದ ತಂತ್ರಜ್ಞಾನಗಳು ಮಕ್ಕಳ ದಿನಚರಿ ಬದಲಿಸಿ ಪೋಷಕರೊಂದಿಗೆ ಒಡನಾಟಗಳು ಕಡಿಮೆಯಾಗಿ ಮಾನಸಿಕ ಅಸ್ವಸ್ಥತೆ ಉಂಟಾಗುತ್ತಿದ್ದು, ಅವರನ್ನು ಉತ್ತಮ ದಾರಿಗೆ ತರಲು ಪೋಷಕರ ಜವಾಬ್ದಾರಿ ಹೆಚ್ಚು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅತಿಯಾದ ಮುದ್ದಿನಿಂದ ಮಕ್ಕಳು ಜೀವನದ ಕಷ್ಟ ಸುಖ ತಿಳಿದುಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದಾರೆ. ಪೋಷಕರು ಮಕ್ಕಳಿಗೆ ಸ್ವತಂತ್ರ ಜೀವನ ನಡೆಸುವುದನ್ನು ಕಲಿಸಲು ವಿಫಲರಾಗಿದ್ದಾರೆ. ಕಷ್ಟದ ಪರಿಸ್ಥಿತಿ ಎದುರಿಸುವ ಮಾನಸಿಕತೆ ಬೆಳೆಸುವಲ್ಲಿ ವಿಫಲರಾಗಿ ಮಕ್ಕಳಲ್ಲಿ ಖಿನ್ನತೆ ಆತ್ಮಹತ್ಯೆಯಂತಹ ಮಾನಸಿಕತೆಗಳು ಹೆಚ್ಚುತ್ತಿರುವುದು ಇದಕ್ಕೆ ನಿದರ್ಶನ ಎಂದು ತಿಳಿಸಿದರು.ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದು, ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಕಿಶೋರ್ ಕುಮಾರ್, ವಸಂತ ಹೋಬಳಿದಾರ್, ಮಂಜುನಾಥ ರಾವ್ ಕದಂ ಮತ್ತಿತರರು ಇದ್ದರು.