ಚಾ.ನಗರ-ಮೆಟ್ಟುಪಾಳ್ಯಂ ರೈಲು ಯೋಜನೆ ಕಾರ್ಯಗತಗೊಳಿಸಿ

| Published : Dec 25 2024, 12:48 AM IST

ಚಾ.ನಗರ-ಮೆಟ್ಟುಪಾಳ್ಯಂ ರೈಲು ಯೋಜನೆ ಕಾರ್ಯಗತಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಮುಖಂಡ ವೆಂಕಟರಮಣಸ್ಚಾಮಿ(ಪಾಪು) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿರಿಯ ಹೋರಾಟಗಾರ ಮಹದೇವಯ್ಯ ಕೋಡಿಉಗನೆ, ಚಂದಕವಾಡಿ ರಾಜಣ್ಣ, ಗೌರಿಶಂಕರ್, ರಂಗಸ್ವಾಮಿ, ಶಿವಣ್ಣ ಇತರರಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರದಕ್ಷಿಣದ ಕೊಂಡಿ ಬೆಸೆಯುವ, ಚಾಮರಾಜನಗರ ಒಂದು ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಸುವರ್ಣಾವಕಾಶ ಇರುವ ಚಾಮರಾಜನಗರ-ಮೆಟ್ಟುಪಾಳ್ಯಂ ರೈಲು ಯೋಜನೆ ಕಾರ್ಯಗತಗೊಳಿಸಿ ಎಂದು ಹಿರಿಯ ಮುಖಂಡ ವೆಂಕಟರಮಣಸ್ಚಾಮಿ (ಪಾಪು) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಹೋರಾಟ ೩೦ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದರ ಬಗ್ಗೆ ಖಾಸಗಿ ಸರ್ವೆ ಆಗಿದೆ, ಯಾವುದೇ ರೀತಿಯಲ್ಲೂ ಅರಣ್ಯಕ್ಕೆ ತೊಂದರೆಯಾಗುವುದಿಲ್ಲ ಎಂದರು. ಈ ಹಿಂದೆ ರೈಲ್ವೆ ರಾಜ್ಯ ಸಚಿವರಾಗಿದ್ದ ಬಸನಗೌಡ ಯತ್ನಾಳ್ ಅವರು ನಗರಕ್ಕೆ ಬಂದಿದ್ದಾಗ ಸರ್ವೆ ಮಾಡಿಸಿ ನಂತರ ಪರಿಶೀಲಿಸಲಾಗುವುದು ಎಂದು ಹೇಳಿದ್ದರು. ಆ ನಂತರ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಲಿಲ್ಲ, ಇದಕ್ಕೆ ತಮಿಳುನಾಡು ರಸ್ತೆ ಸಾರಿಗೆಯೇ ಕಾರಣವಾಗಿತ್ತು ಎಂದರು. ಈ ಹಿಂದೆ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ರೈಲ್ವೆ ಸಚಿವರಾಗಿದ್ದ ನಿತೀಶ್ ಕುಮಾರ್. ಜಾಫರ್ ಷರೀಪ್ ಅವರಿಗೂ ಮನವಿ ಸಲ್ಲಿಸಲಾಗಿತ್ತು, ಈಗ ರಾಜ್ಯ ಸಚಿವರಾಗಿರುವ ವಿ.ಸೋಮಣ್ಣನವರು ಕ್ರಿಯಾಶೀಲರಾಗಿದ್ದು ಮುಂದೆ ಮಂಡಿಸಲಿರುವ ರೈಲ್ವೆ ಬಜೆಟ್‌ನಲ್ಲಿ ಈ ಯೋಜನೆ ಸೇರಿಸಬೇಕೆಂದು ಮನವಿ ಮಾಡಿದರು.

ಈ ಯೋಜನೆ ಚಾಮರಾಜನಗರದಿಂದ ಕೇವಲ ೭೦ಕಿ.ಮೀ. ಒಂದೆರಡು ಸಣ್ಣ ಗುಡ್ಡ ಬಿಟ್ಟರೆ ಯಾವುದೇ ಅರಣ್ಯ ನಾಶವಾಗುವುದಿಲ್ಲ, ನಮ್ಮ ಹಿರಿಯ ಹೋರಾಟಗಾರರು ಈ ಬಗ್ಗೆ ಸರ್ವೆ ಮಾಡಿದ್ದಾರೆ, ತಾಳವಾಡಿ, ಕೋಡಿಪುರ, ದೊಡ್ಡಪುರ, ತಲಮಲೈ, ಸುಲ್ತಾನ್ ರೋಡ್, ಭವಾನಿ ಡ್ಯಾಂ, ಸಿರಿಮುಗೈ, ಮೆಟ್ಟುಪಾಳ್ಯಂ ಇದು ಜಾರಿಯಾದರೆ ಕೇರಳ ಸೇರಿಂದಂತೆ ಇಡೀ ದಕ್ಷಿಣ ಭಾರತವನ್ನೇ ಬೆಸೆಯುತ್ತಿದೆ ಎಂದರು. ೧೯೨೬ರಲ್ಲೇ ಚಾಮರಾಜನಗರ ರೈಲು ಮಾರ್ಗ ಆದ ನಂತರ ಮುಂದೆ ಯಾವ ವಿಸ್ತರಣೆಯೂ ಆಗಿಲ್ಲ, ಪ್ರತಿ ಬಜೆಟನಲ್ಲೂ ಇದಕ್ಕೆ ಅಂದಾಜು ವೆಚ್ಚ ಹೇಳಲಾಗುತ್ತದೆ ಹೊರತು ಮುಂದಿನ ಯಾವ ಕಾರ್ಯಗಳು ಆಗುತ್ತಿಲ್ಲ ಎಂದರು.

ಚಾಮರಾಜನಗರ-ಮೆಟ್ಟುಪಾಳಂ ರೈಲು ಯೋಜನೆ ಜಾರಿಯಾದರೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ದೇಶದ ಯಾವುದೇ ಭಾಗಕ್ಕೆ ಪ್ರಯಾಣ ಮಾಡಲು ಮತ್ತು ಸರಕುಗಳನ್ನು ಸಾಗಿಸಲು ತುಂಬಾ ಅನುಕೂಲವಾಗುತ್ತದೆ ಮತ್ತು ಲಾಭದಾಯಕವು ಆಗುತ್ತದೆ. ಈ ಬಗ್ಗೆ ನಮ್ಮ ಸಂಸದರು ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು. ಶೀಘ್ರದಲ್ಲೇ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣನವರ ಜೊತೆಗೂಡಿ, ನಿಯೋಗದೊಂದಿಗೆ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಹೋರಾಟಗಾರ ಮಹದೇವಯ್ಯ ಕೋಡಿಉಗನೆ, ಚಂದಕವಾಡಿ ರಾಜಣ್ಣ, ಗೌರಿಶಂಕರ್, ರಂಗಸ್ವಾಮಿ, ಶಿವಣ್ಣ ಇದ್ದರು.