ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ರಾಜ್ಯ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ. ಮಾದೇಶ್ ಸೂಚಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ಯೋಜನೆಗಳು ಕಟ್ಟೆ ಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು ಎಂದರು.
ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ. ಶಾಸಕರ ಸಹಕಾರದೊಂದಿಗೆ ಬಾಕಿ ಉಳಿದಿರುವ ಅರ್ಹ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಸೌಲಭ್ಯ ತಲುಪಿಸಬೇಕೆಂದು ಕರೆ ನೀಡಿದರು.ಗೃಹಲಕ್ಷ್ಮೀ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿರುವ ಫಲಾನುಭವಿ ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ ನೀಡಿ ಎರಡನೇ ಯಜಮಾನಿ ಹೆಸರಿನಲ್ಲಿ ಹೊಸ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಆದಾಯ ತೆರಿಗೆ, ಕಂದಾಯ, ಆಹಾರ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು.
ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ತಮ್ಮ ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ತೋರಿಸಿದರೆ ಕಂಡಕ್ಟರ್‌ಗಳು ಟಿಕೆಟ್ ನೀಡಬೇಕು, ಬಸ್‌ಗಳಲ್ಲಿ ಪ್ರಯಾಣಿಕರ ಜೊತೆಗೆ ಅಸಭ್ಯ ವರ್ತನೆ ತೋರಬಾರದೆಂದು ಸಲಹೆ ನೀಡಿದರು.ತಾಪಂ ಇಒ ಎಚ್.ಜಿ. ಶ್ರೀನಿವಾಸ್ ಮಾತನಾಡಿ, ಬಾಕಿ ಉಳಿದಿರುವ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮುಂದಿನ ಸಭೆಯ ವೇಳೆಗೆ ಶೇ.99ರಷ್ಟು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಸದಸ್ಯ ಎಸ್.ಎಂ.ಸುರೇಶ್ ಮಾತನಾಡಿ, ಹಲವು ಗ್ರಾಪಂಗಳಲ್ಲಿ ಮರಣ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.ಸದಸ್ಯರಾದ ಸಿ.ಚೇತನ್, ಎಚ್.ಸಿ.ಹರೀಶ್ ಮಾತನಾಡಿದರು. ತಾಲೂಕು ಪಂಚಾಯತಿ ಯೋಜನಾಧಿಕಾರಿ ದೀಪು, ಸಮಿತಿ ಸದಸ್ಯರಾದ ನಾಗೇಶ್, ಚಂದ್ರಮ್ಮ, ಟಿ.ಸಿ.ಚನ್ನಯ್ಯ, ಶಿವಣ್ಣ, ನಾಗೇಂದ್ರ, ಅರ್ಷದ್ ಪಾಷ, ರಾಜೇಶ್, ಕೀರ್ತನ್ ಕುಮಾರ್, ಎಂ.ಎಸ್.ಸಾಗರ್, ಸಿದ್ದರಾಜು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))