ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಿದ್ಧಪಡಿಸಿರುವ ಕಾಂತರಾಜ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಹಿಂದುಗಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಮಂಗಲ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನ್ಯಾಯಮೂರ್ತಿ ಕಾಂತರಾಜು ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದ್ದರು. ೯ ವರ್ಷಗಳ ಬಳಿಕ ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಆ ವರದಿ ಸಲ್ಲಿಕೆಯಾಗಿದ್ದು, ಮುಖ್ಯಮಂತ್ರಿಗಳು ಮುಂಬರುವ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಿ, ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
೮೦ರ ದಶಕದಲ್ಲಿ ರಾಮಕೃಷ್ಣ ಹೆಗ್ಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಚನೆಯಾದ ಚನ್ನಪ್ಪರೆಡ್ಡಿ ಆಯೋಗದ ವರದಿಯು ಅನುಷ್ಠಾನಗೊಳ್ಳಲಿಲ್ಲ, ಡಿ.ದೇವರಾಜ ಅರಸು ಅವರು ಹಾವನೂರು ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಳೆದ ಚಳಿಗಾಲದ ಅಧಿವೇಶನದಲ್ಲಿಯೇ ವರದಿ ಮಂಡನೆ ಮಾಡಿ ಜಾರಿಗೊಳಿಸುವಂತೆ ಡಿ.೫ ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ವರದಿ ಮಂಡಿಸಿ ಜಾರಿಗೊಳಿಸಲಿಲ್ಲ. ೧೬೯ ಕೋಟಿ ಖರ್ಚು ಮಾಡಿ ಸಮೀಕ್ಷೆ ನಡೆಸಲಾಗಿದೆ. ಈ ವರದಿ ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಧ್ವನಿಯಾಗಬೇಕು. ಆ ಮೂಲಕ ಹಿಂದುಳಿದ ವರ್ಗಗಳ ಹಣೆಪಟ್ಟಿ ಹೋಗಲಾಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಹಿಂದುಗಳಿದ ವರ್ಗಗಳ ಒಕ್ಕೂಟ ರಚನೆಯಾಗಿದ್ದು, ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಗುಂಡ್ಲುಪೇಟೆ ತಾಲೂಕು ಘಟಕ ರಚನೆಯಾಗಿದ್ದು, ಉಳಿದ ತಾಲೂಕು ಘಟಕಗಳನ್ನು ಶೀಘ್ರದಲ್ಲೇ ರಚನೆ ಮಾಡಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ನಟರಾಜೇಗೌಡ, ರಾಮಶೆಟ್ಟಿ, ವೈ.ಕೆ.ಮೋಳೆ ನಾಗರಾಜು, ಮುಹದೇವಸ್ವಾಮಿ, ಬೆಳಶೆಟ್ಟಿ, ಸಂಪತ್ ಕುಮಾರ್ ಇದ್ದರು.