ಸಾರಾಂಶ
- ಅಲ್ಪಸಂಖ್ಯಾತರು, ಮುಸ್ಲಿಂ, ಕ್ರೈಸ್ತರ ಅಭಿವೃದ್ಧಿಗೆ ಅಹಿಂದ ಚಳವಳಿ ಆಗ್ರಹ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದಲ್ಲಿ ಜಾತಿಗಣತಿ ಪೂರ್ಣಗೊಳಿಸಿ, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ಅಹಿಂದ ಚಳುವಳಿ ಜಿಲ್ಲಾ ಸಂಚಾಲಕ ಎನ್.ಅಜ್ಜಪ್ಪ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸುವ ಜೊತೆಗೆ ಆದಷ್ಟು ಬೇಗನೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದರು.ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಅಹಿಂದ ಸಮುದಾಯದ ಪಾತ್ರ ಮಹತ್ವದ್ದು. ಹಾಗಾಗಿ, ಈ ಸಮುದಾಯದ ಬೇಡಿಕೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸಿ, ನ್ಯಾಯ ಒದಗಿಸಬೇಕು. ಸರ್ಕಾರಿ ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇರುವಂತೆ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೂ ಉದ್ಯೋಗ ಬಡ್ತಿ ಮೀಸಲಾತಿ ಕಲ್ಪಿಸಬೇಕು ಎಂದರು.
ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ-ಪಂಗಡಗಳ ಎಲ್ಲಾ ಅಭಿವೃದ್ಧಿ ನಿಗಮಗಳಲ್ಲಿನ ಯೋಜನೆಗಳಿಗೆ ವಿಧಾನಸಭಾ ಕ್ಷೇತ್ರವಾರು ನಿಗದಿಪಡಿಸಿದ ಫಲಾನುಭವಿಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ಅಗತ್ಯವಾದ ಅನುದಾನವನ್ನೂ ಬಿಡುಗಡೆ ಮಾಡಬೇಕು. 2025-26ನೇ ಸಾಲಿನ ಬಜೆಟ್ ಗಾತ್ರದ ಶೇ.1.11ರಷ್ಟು ಅನುದಾನ ಮಾತ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.ರಾಜ್ಯದಲ್ಲಿರುವ ಒಟ್ಟು ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಬೇಕು. ಪ್ರವರ್ಗ 2ಬಿ ಯಲ್ಲಿರುವ ಮುಸ್ಲಿಮರಿಗೆ ಶೇ.4ರಷ್ಟು ಇದ್ದ ಮೀಸಲಾತಿ ಮರು ಜಾರಿಗೊಳಿಸಬೇಕು. ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ಘೋಷಣೆ ಕಾರ್ಯಗತಗೊಳಿಸಬೇಕು. ನಮ್ಮ ಬೇಡಿಕೆಗಳಿಗೆ ಸರ್ಕಾರ ಪ್ರಥಮ ಆದ್ಯತೆ ಮೇಲೆ ಸ್ಪಂದಿಸಬೇಕು ಎಂದು ತಿಳಿಸಿದರು.
ಮುಸ್ಲಿಂ ಮುಖಂಡ ಖಾಸಿಂ ಸಾಬ್ ಮಾತನಾಡಿ, ಕೆಲ ಜಾತ್ರೆ, ಹಬ್ಬಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು. ನಿಗಮ, ಮಂಡಳಿಗಳ ಅಧ್ಯಕ್ಷ, ಪದಾಧಿಕಾರಿಗಳ ನೇಮಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ಆಗ್ರಹಿಸಿದರು.ಕ್ರೈಸ್ತ ಸಮುದಾಯದ ಭಾಸ್ಕರ್ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಕ್ರಿಶ್ಚಿಯನ್ ಸಮುದಾಯ ಅತ್ಯಂತ ಹಿಂದುಳಿದಿದೆ. ನಮ್ಮ ಸಮುದಾಯದ ಅಭಿವೃದ್ಧಿ, ಏಳಿಗೆಗಾಗಿ ಸರ್ಕಾರ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಬೇಕು. ಕ್ರೈಸ್ತ ಸಮಾಜಕ್ಕೆ ಸಮುದಾಯ ಭವನಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಅಹಿಂದ ಚಳವಳಿ ಮುಖಂಡರಾದ ಸಿದ್ದನೂರು ಬಸವರಾಜ, ಡಿ.ಎನ್. ಹಾಲೇಶ ನಲ್ಕುದುರೆ, ವಿಜಯಕುಮಾರ, ಕೇಶವಮೂರ್ತಿ ಇತರರು ಇದ್ದರು.- - -
-29ಕೆಡಿವಿಜಿ3.ಜೆಪಿಜಿ: ದಾವಣಗೆರೆಯಲ್ಲಿ ಮಂಗಳವಾರ ಅಹಿಂದ ಚಳವಳಿ ಜಿಲ್ಲಾ ಸಂಚಾಲಕ ಎನ್.ಅಜ್ಜಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.