ಶಿವಮೊಗ್ಗ: ಜಾತಿ ಗಣತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿದ್ದು, ಕೂಡಲೇ ಜಾತಿಗಣತಿ ವರದಿ ಜಾರಿಗೆ ತನ್ನಿ ಇಲ್ಲವಾದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2013-14ರ ಅವಧಿಯ ಸರ್ಕಾರದಲ್ಲಿ ವಿಧಾನ ಮಂಡಲದ ಅಧಿವೇಶನದಲ್ಲಿ ನಾನು ಆಗ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದಾಗ, ಕಾಂತ್‌ರಾಜ್ ವರದಿ ಜಾರಿಗೆ ಒತ್ತಾಯಿಸಿದಾಗ ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯ ಅವರು ಜಾತಿಗಣತಿ ವರದಿಯನ್ನು ಮಂಡಿಸುವುದಾಗಿ ಒಪ್ಪಿಕೊಂಡಿದ್ದರು. ಮುಖ್ಯಮಂತ್ರಿಗಳೇ ಮೇಲ್ಮನೆಗೆ ಬಂದು ಸ್ಪಷ್ಟನೆ ನೀಡಬೇಕೆಂದು ನಾನು ಹಠ ಹಿಡಿದಾಗ, ಪರಿಷತ್ತಿಗೇ ಬಂದು ವರದಿ ಮಂಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ವರದಿ ಬಂದು 10 ವರ್ಷವಾದರೂ ಇನ್ನೂ ಜಾರಿಗೆ ತಂದಿಲ್ಲ ಎಂದು ದೂರಿದರು. ನಿಮ್ಮ ಸ್ಥಾನ ಉಳಿಸುವುದಕ್ಕಾಗಿ ರಾಜಕೀಯ ಸ್ವಾರ್ಥಕ್ಕೆ ಈ ವರದಿಯನ್ನು ಬಳಸಿಕೊಂಡರೇ ವಿನಃ, ದಲಿತರ ಉದ್ಧಾರಕನೆಂದು ಹೇಳಿಕೊಂಡು ಬಂದಿರುವ ನೀವು ಆ ವರ್ಗಕ್ಕೆ ಅಮೂಲ್ಯವಾದ ಕೊಡುಗೆ ನೀಡಬಹುದಾಗಿದ್ದ ಈ ಜಾತಿಗಣತಿ ವರದಿಯನ್ನು ಮಂಡಿಸದೆ ಸದನದಲ್ಲೂ ಚರ್ಚೆಯನ್ನೂ ಮಾಡದೇ, ಜಾರಿಗೆ ತರದೇ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಈಗ ಇನ್ನೂ 90 ದಿನಗಳ ಕಾಲ ಮುಂದೂಡಿ ಪರಿಷ್ಕೃತ ಸಮೀಕ್ಷೆಯ ನೆಪದಲ್ಲಿ ಹಿಂದುಳಿದ ದಲಿತ ವರ್ಗಕ್ಕೆ ಅನ್ಯಾಯ ಮಾಡಿದ್ದರೀರಿ. ನಿಮ್ಮ ಮಗ ಡಾ.ಯತೀಂದ್ರ ಅವರು ಮೇಲ್ವರ್ಗದ ಒತ್ತಡಕ್ಕೆ ಮಣಿದು ಈ ವರದಿ ಜಾರಿಯಾಗಿಲ್ಲ ಎಂದು ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ ಎಂದು ಕುಟುಕಿದರು.
ಈ ವರದಿಗೆ 160 ಕೋಟಿ ರು. ವ್ಯಯ ಮಾಡಿದ್ದು, ನೀರಲ್ಲಿ ಹುಣಸೇ ಹುಳಿ ಹಿಂಡಿದ ಹಾಗೆ ಆಗಿದೆ. ಹೊಸದಾಗಿ ಜಾತಿ ಗಣತಿಗೆ ಈಗ ನಿಮ್ಮ ಬಳಿ ಹಣವೂ ಇಲ್ಲ, ಶಿಕ್ಷಕರು ದೊರೆಯುವುದಿಲ್ಲ. ನೀವು ಕೇಂದ್ರ ಹೈಕಮಾಂಡ್ ಮುಂದೆ ಮಂಡಿಯೂರಿರುವುದು ಸ್ಪಷ್ಟವಾಗಿದೆ. ಹಿಂದುಳಿದ ದಲಿತ ವರ್ಗಕ್ಕೆ ನ್ಯಾಯ ಒದಗಿಸುವ ಮನಸ್ಸಿದ್ದರೆ ಹೈಕಮಾಂಡ್ ಒತ್ತಡ ತಿರಸ್ಕರಿಸಿ, ತಕ್ಷಣ ಕಾಂತ್‌ರಾಜ್ ವರದಿ ಜಾರಿಗೊಳಿಸಿ. ಮುಖ್ಯಮಂತ್ರಿ ಸ್ಥಾನವನ್ನು ಬಲಿಕೊಟ್ಟಾದರೂ ಈ ಸಮುದಾಯಗಳಿಗೆ ನ್ಯಾಯ ಒದಗಿಸಿ ಇಲ್ಲವಾದಲ್ಲಿ ಅಧಿಕಾರದಿಂದ ಕೆಳಗಿಳಿಯಿರಿ ಇಲ್ಲವಾದಲ್ಲಿ ಕರ್ನಾಟಕದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಹರಿಹಾಯ್ದರು. ಪತ್ರಿಕಾಗೋಷ್ಠಿಯಲ್ಲಿ ಕೆ.ಈ.ಕಾಂತೇಶ್, ಎಂ.ಶಂಕರ್, ಈ.ವಿಶ್ವಾಸ್, ಸುವರ್ಣಾಶಂಕರ್, ಸುನೀತಾ ನಾಗರಾಜ್, ಬಾಲು, ವಿಷ್ಣು, ರಾಜಾರಾಮ್ ಭಟ್, ಅನಿತಾ ಶಿವಾಜಿ, ಜಾದವ್ ಮತ್ತಿತರರಿದ್ದರು.ಜಾತಿಗಣತಿ ವರದಿ ಜಾರಿಗೆ ತನ್ನಿ
ಜಾತಿ ಗಣತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿದ್ದು, ಕೂಡಲೇ ಜಾತಿಗಣತಿ ವರದಿ ಜಾರಿಗೆ ತನ್ನಿ ಇಲ್ಲವಾದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.