ಸುಪ್ರೀಂ ತೀರ್ಪಿನಂತೆ ಒಳಮೀಸಲು ಅನುಷ್ಠಾನ ಮಾಡಿ

| Published : Sep 11 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಮಿತಿ ದಾದಾಸಾಹೇಬ ಎನ್.ಮೂರ್ತಿ ಸ್ಥಾಪಿತ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಮಿತಿ ದಾದಾಸಾಹೇಬ ಎನ್.ಮೂರ್ತಿ ಸ್ಥಾಪಿತ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಮಿತಿ ಜಿಲ್ಲಾ ಮುಖಂಡ ಅಶೋಕ ಕರೆಕಲ್ಲ ಮಾತನಾಡಿ, ಪರಿಶಿಷ್ಟ ಜಾತಿಗಳ ಮೀಸಲಾತಿಯು ೧೦೧ ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಮೀಸಲಾತಿಯನ್ನು ೪ ಗುಂಪುಗಳನ್ನಾಗಿ ವರ್ಗೀಕರಣ ಮಾಡಬೇಕು. ಅದಕ್ಕಾಗಿ ಕಳೆದ ಮೂರು ದಶಕಗಳಿಂದ ಹೋರಾಟ ನಡೆಯುತ್ತಿವೆ. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ೨೦೦೪ರಲ್ಲಿ ನಿ.ನ್ಯಾ ಎ.ಜೆ.ಸದಾಶಿವ ಆಯೋಗ ರಚಿಸಿತು. ಆಯೋಗ ಸರ್ಕಾರಕ್ಕೆ ೨೦೧೨ರಲ್ಲಿ ವರದಿ ಸಲ್ಲಿಸಿದೆ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಸಚಿವ ಸಂಪುಟವು ನಿವೃತ್ತ ನ್ಯಾ.ಸದಾಶಿವ ಅವರ ವರದಿಯಲ್ಲಿನ ದತ್ತಾಂಶದ ಪ್ಯಾರಾ-೧ ಅನ್ನು ಅಂಗೀಕರಿಸಿ ೩೧-೦೩-೨೦೨೩ರಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ.

ರಾಜ್ಯ ಸರ್ಕಾರ ಮೀನಾಮೇಷ ಎಣಿಸದೆ ಸುಪ್ರೀಂ ಕೋರ್ಟ್ ತೀರ್ಪಿಗೆ ಹಾಗೂ ಸಂವಿಧಾನಕ್ಕೆ ಗೌರವ ನೀಡಿ ಈ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡಮನಿ ಮಾತನಾಡಿ, ಸುಪ್ರೀಂ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ತರಲಿ. ೨೦೨೩-೨೦೨೪ ಮತ್ತು ೨೦೨೪-೨೦೨೫ನೇ ಸಾಲಿನಲ್ಲಿ ₹ ೨೫,೩೯೧ ಕೋಟಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಎಸ್‌ಸಿಪಿ-ಬಿಎಸ್‌ಪಿ ಅಭಿವೃದ್ಧಿಯ ಹಣ ದುರ್ಬಳಕೆ ಮಾಡಿಕೊಂಡಿದ್ದು, ರಾಜ್ಯ ಸರ್ಕಾರ ಈ ಹಣವನ್ನು ವಾಪಸ್ ನೀಡಲೇಬೇಕು ಎಂದು ಆಗ್ರಹಿಸಿದರು.

ಮುಖಂಡ ತಿಪ್ಪಣ್ಣ ಮಾದರ ಮಾತನಾಡಿ, ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಜಾರಿ ಆಗುವವರೆಗೂ ಕೇಂದ್ರ ಮತ್ತು ರಾಜ್ಯದ ಎಲ್ಲಾ ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸಲಿ. ಖಾಸಗಿ ಉದ್ಯೋಗ ಕ್ಷೇತ್ರ ಮತ್ತು ಗುತ್ತಿಗೆ ನೇಮಕಾತಿಗಳಲ್ಲಿಯೂ ಎಸ್ಸಿ, ಎಸ್ಟಿ ಮೀಸಲಾತಿ ಜಾರಿಯಾಗಲಿ. ಕೇಂದ್ರ ಸರ್ಕಾರ ಕೂಡಲೇ ಎಸ್ಸಿ,ಎಸ್ಟಿ ಅಭಿವೃದ್ಧಿಗಾಗಿ ಎಸ್‌ಸಿಪಿ, ಬಿಎಸ್‌ಪಿ ಕಾಯ್ದೆ ರಚಿಸಿ ಜನಸಂಖ್ಯೆಗನುಗುಣವಾಗಿ ಬಜೆಟ್‌ನಲ್ಲಿ ಹಣ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಜೀವ ಕಲ್ಯಾಣಿ, ರಮೇಶ ಆಲಮಟ್ಟಿ, ಅಶೋಕ ನಡುವಿನಮನಿ, ನಾಗರಾಜ ತಳವಾರ, ಯಮನಪ್ಪ ಮ್ಯಾಗೇರಿ, ಬಸಲಿಂಗಪ್ಪ ನಂದಿ, ಪರಸು ಸಂದಿಮನಿ, ಪರಶುರಾಮ ಚಿಮ್ಮಲಗಿ, ಮಾರುತಿ ಮಾದರ, ಹನುಮಂತ ಹಾದಿಮನಿ, ಸೋಮು ಯಾರನಾಳ, ಹನುಮಂತ ಬಾಗೇವಾಡಿ ಮುಂತಾದವರು ಇದ್ದರು.