ಸಾರಾಂಶ
ರಾಮನಗರ: ಪ್ರೊ.ಅನ್ನಪೂರ್ಣಮ್ಮ ಆಯೋಗದ ವರದಿ ಜಾರಿ ಸಾಧ್ಯವಾಗದಿದ್ದರು ಪರವಾಗಿಲ್ಲ ಕಾಂತರಾಜು ಆಯೋಗದ ವರದಿಯನ್ನಾದರು ಅನುಷ್ಠಾನಕ್ಕೆ ತಂದರೆ ಮಡಿವಾಳ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ ಹೇಳಿದರು.
ನಗರದ ಡಾ.ಬಿ.ಆಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲೂಕು ಮಡಿವಾಳ ಸಂಘದ ವತಿಯಿಂದ ನಡೆದ ಜನಜಾಗೃತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕೆಂದು ಪ್ರೊ.ಅನ್ನಪೂರ್ಣಮ್ಮ ಆಯೋಗ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಸರ್ಕಾರ ಈ ವರದಿ ಅನ್ವಯ ಕೇಂದ್ರಕ್ಕೆ ಶಿಫಾರಸ್ಸು ಮಾಡದೇ ವಿಳಂಬ ಮಾಡುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಮಡಿವಾಳರಿಗೆ ಮನ್ನಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ರಾಜಕೀಯ ಸ್ಥಾನಮಾನವೂ ಇಲ್ಲವಾಗಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ ಪರಿಶಿಷ್ಟ ಜಾತಿಗೆ ಸೇರಿಸಿ ಆ ವರ್ಗದ ಮೀಸಲಾತಿ ಸೌಲಭ್ಯ ದೊರೆಯುವಂತೆ ಮಾಡಬೇಕೆಂದು ಹೋರಾಟ ನಡೆಸುತ್ತಾ ಬಂದಿದ್ದೇವೆ. ಪ್ರೊ.ಅನ್ನಪೂರ್ಣೇಶ್ವರಿ ಆಯೋಗದ ವರದಿ ಸಾಧ್ಯವಾಗದಿದ್ದರೂ ಕಾಂತರಾಜು ಆಯೋಗದ ವರದಿಯನ್ನಾದರು ಅನುಷ್ಠಾನಕ್ಕೆ ತಂದರೆ ನಮ್ಮ ಸಮುದಾಯಕ್ಕೆ ನೆರವಾಗಲಿದೆ ಎಂದು ಹೇಳಿದರು.ಯಾವುದೇ ಸರ್ಕಾರಗಳು ಬರಲಿ ನಮ್ಮ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ನಮ್ಮ ಸಮುದಾಯದವರು ಶಾಸಕರಾಗಿಲ್ಲ ಎಂಬ ನೋವಿದೆ. ಆದರೆ, ನಾವು ಬೆಂಬಲಿಸಿದವರು ಮಾತ್ರ ಶಾಸಕರಾಗಿ ಆಯ್ಕೆಯಾಗುತ್ತಾರೆ. ಚುನಾವಣೆಗಳಲ್ಲಿ ನಾವು ನಿರ್ಣಾಯಕಪಾತ್ರ ವಹಿಸುತ್ತೇವೆ. ಯಾರು ನಮ್ಮ ಸಮುದಾಯದ ಬೇಕು ಬೇಡಗಳಿಗೆ ಸ್ಪಂದಿಸುತ್ತಾರೊ ನಾವು ಅವರೊಂದಿಗೆ ನಿಲ್ಲಬೇಕು ಎಂದು ತಿಳಿಸಿದರು.
ಮಡಿವಾಳ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಸಂಪತ್ತನ್ನಾಗಿ ಮಾಡಬೇಕು. ನಮ್ಮ ಸಮುದಾಯದಲ್ಲಿಯೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಫಲಿತಾಂಶ ಪಡೆದಿರುವ ಮಕ್ಕಳು ಇದ್ದಾರೆ. ಇದಕ್ಕೆ ಸಂಘದ ವತಿಯಿಂದ ನಡೆಸುತ್ತಿರುವ ಪ್ರತಿಭಾ ಪುರಸ್ಕಾರವೂ ಸ್ಫೂರ್ತಿಯಾಗಿದೆ ಎಂದರು.ರಾಮನಗರದಲ್ಲಿ ಡೋಬಿ ಘಾಟ್ ಮತ್ತು ವಿದ್ಯಾರ್ಥಿ ನಿಲಯ ಅವಶ್ಯಕತೆ ಇದೆ. ಎಲ್ಲೆಡೆ ವಸತಿ ನಿಲಯ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ. ಅದೇ ರೀತಿ ಇಲ್ಲಿಯೂ ಡೋಬಿ ಘಾಟ್ ನಿರ್ಮಾಣ ಮಾಡಲು ಶಾಸಕ ಇಕ್ಬಾಲ್ ಹುಸೇನ್ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದು, ಅವರ ಸಹಕಾರ ಪಡೆದುಕೊಳ್ಳುವಂತೆ ಸಂಘದ ಪದಾಧಿಕಾರಿಗಳಿಗೆ ನಂಜಪ್ಪ ಸಲಹೆ ನೀಡಿದರು.
ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಮಂಟೇದಯ್ಯ ಮಾತನಾಡಿ, ಮಡಿವಾಳ ಸಮುದಾಯಕ್ಕೆ ಡೋಬಿಘಾಟ್, ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರಿಗೆ ಮನವಿ ಮಾಡಲಾಗಿದ್ದು, ಅವರು ಸಹಕಾರ ನೀಡುತ್ತಿದ್ದಾರೆ. ಜೊತೆಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರು 55ಕ್ಕೂ ಹೆಚ್ಚು ವೃತ್ತಿ ನಿರತರಿಗೆ ನಗರಸಭೆಯಿಂದ ಸವಲತ್ತುಗಳನ್ನು ವಿತರಿಸಿದ್ದಾರೆ. ಇವರಿಬ್ಬರಿಗೂ ಸಮುದಾಯದ ಪರವಾಗಿ ಅಭಿನಂದಿಸುತ್ತೇನೆ ಎಂದರು.ಹಾಸನ ವಿಭಾಗೀಯ ಅಧ್ಯಕ್ಷೆ ಪದ್ಮಾರವಿ ಮಾತನಾಡಿ, ವ್ಯಕ್ತಿ ಸಮಾಜದಲ್ಲಿ ಗುರುತಿಸಿ ಕೊಳ್ಳಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲರು ಸಂಘಟಿತರಾಗಿ ಸಮುದಾಯದಕ್ಕೆ ಅಗತ್ಯ ಸೌಲಭ್ಯ ಒದಗಿಸುವ ಜೊತೆಗೆ ತಮ್ಮ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ನಮ್ಮ ಸಮುದಾಯಕ್ಕೆ ಧ್ವನಿ ಬೇಕಿದ್ದು, ಶಾಸಕರಾಗಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಆಗಬೇಕಿದೆ. ಮಡಿವಾಳ ನಿಗಮ ಸ್ಥಾಪನೆ ಆಗಿದ್ದು ಆ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು ಮಾತನಾಡಿ, ಮಡಿವಾಳ ಸಮುದಾಯದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಂಘಟನೆ ಮುಖ್ಯ. ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಎಲ್ಲ ವರ್ಗದ ಜನರ ಕಷ್ಟ ಸುಖ ಗೊತ್ತಿದೆ. ನಿಮ್ಮಗಳ ನೆರವಿಗೂ ಶಾಸಕರು ಸ್ಪಂದಿಸುತ್ತಾರೆ. ಅವರು ಪ್ರತಿನಿತ್ಯ ಎಲ್ಲ ವರ್ಗದ ಜನರ ಕಷ್ಟ ಸುಖಗಳನ್ನು ಕೇಳುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸಮುದಾಯ ಸಂಘಟನೆ ಸದೃಢವಾಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಮಡಿವಾಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ನಾರಾಯಣ್, ಮಾಗಡಿ ಶ್ರೀನಿವಾಸ್, ಪುಟ್ಟಸ್ವಾಮಿ, ಸಿದ್ದಗಂಗಯ್ಯ ಪಾಂಡವಪುರ ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಶಿಕ್ಷಕ ಚಿಕ್ಕವೀರಯ್ಯ ಮತ್ತಿತರರು ಉಪಸ್ಥಿತರಿದ್ದರು.
25ಕೆಆರ್ ಎಂಎನ್ 1.ಜೆಪಿಜಿರಾಮನಗರದ ಡಾ.ಬಿ.ಆಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲೂಕು ಮಡಿವಾಳ ಸಂಘದ ವತಿಯಿಂದ ನಡೆದ ಜನಜಾಗೃತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು.