ಸಾರಾಂಶ
- ಹರಿಹರದಲ್ಲಿ ರೈತ ಸಂಘ, ಹಸಿರು ಸೇನೆ ತಾಲೂಕು ಮುಖಂಡ ಜಿ.ಪ್ರಭುಗೌಡ ಒತ್ತಾಯ- - -
ಕನ್ನಡಪ್ರಭ ವಾರ್ತೆ ಹರಿಹರರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಹರಿಹರ ತಾಲೂಕು ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಜಿ.ಪ್ರಭುಗೌಡ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಭತ್ತಕ್ಕೆ ₹2320 ದರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಇದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಖರೀದಿದಾರರು, ದಲ್ಲಾಳರು, ಕಂಪನಿಗಳ ಖರೀದಿದಾರರು ಅತ್ಯಂತ ಕಡಿಮೆ ದರಕ್ಕೆ ಭತ್ತ ಖರೀದಿ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಪ್ರಸ್ತುತ ಮಾರುಕಟ್ಟೆಯಲ್ಲಿ ಆರ್.ಎನ್.ಆರ್. ಸೋನಾ ಮಸೂರಿ ಭತ್ತಕ್ಕೆ ₹1600 ದರ ಇದೆ. ರೈತರು 1 ಎಕರೆಯಲ್ಲಿ ಭತ್ತ ಬೆಳೆಯಲು ₹40 ರಿಂದ ₹45 ಸಾವಿರ ಖರ್ಚು ಮಾಡುತ್ತಾರೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಭತ್ತದ ಸರಾಸರಿ ಇಳುವರಿ 25 ಕ್ವಿಂ. ಮಾತ್ರ ಇರುತ್ತದೆ. ₹1600 ದರದಲ್ಲಿ ಭತ್ತ ಮಾರಾಟವಾದರೆ ₹40 ಸಾವಿರ ಮಾತ್ರ ರೈತರಿಗೆ ಸಿಗುತ್ತದೆ. ಒಟ್ಟಾರೆ ಪ್ರತಿ ಎಕರೆಗೆ ರೈತ ₹6000 ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಪ್ರತಿ ಕ್ವಿಂ. ಭತ್ತಕ್ಕೆ ಕೇರಳ ಮಾದರಿಯಲ್ಲಿ ₹1200 ಪ್ರೋತ್ಸಾಹಧನ ನೀಡಬೇಕು. ಕೇಂದ್ರ ಕನಿಷ್ಠ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹಧನ ಸೇರಿ ಪ್ರತಿ ಕ್ವಿಂ. ಭತ್ತಕ್ಕೆ ₹3500 ನೀಡಬೇಕು ಎಂದರು.
ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸುಗ್ರೀವಾಜ್ಞೆ ಮೂಲಕ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ಜಾರಿಗೆ ತಂದು ಅನ್ಯಾಯ ಸರಿಪಡಿಸಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಭತ್ತ ಖರೀದಿಸಿದ ದಲ್ಲಾಳರಿಗೆ, ಕಂಪನಿ ಖರೀದಿದಾರರಿಗೆ 3ರಿಂದ 5 ವರ್ಷ ಜೈಲು ಶಿಕ್ಷೆ, ಲೈಸೆನ್ಸ್ ರದ್ದು, ವ್ಯತ್ಯಾಸದ ಹಣದ ಐದು ಪಟ್ಟು ಹಣವನ್ನು ಖರೀದಿದಾರನೇ ರೈತರಿಗೆ ನೀಡಬೇಕೆಂದು ಸ್ಪಷ್ಟವಾದ ಕಾಯ್ದೆ ಜಾರಿ ಮಾಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಗ್ರೇಡ್-2 ತಹಸೀಲ್ದಾರ್ ಪುಷ್ಪವತಿ ಅವರಿಗೆ ಮನವಿ ಸಲ್ಲಿಸಲಾಯಿತು. ಗರಡಿಮನಿ ಬಸಣ್ಣ, ಮಹಾದೇವಪ್ಪ ದೊಗ್ಗಳ್ಳಿ, ರುದ್ರಗೌಡ ಪಾಳ್ಯ, ಹನುಮಂತಪ್ಪ, ಸುರೇಶ ದಿಟೂರು, ಹುಚ್ಚಯ್ಯಶೆಟ್ಟಿ ಕೊಕ್ಕನೂರು, ಟಿ.ನಿಜಗುಣ ಹಿಂಡ್ಸಘಟ್, ಭೀಮಾನಾಯ್ಕ ಚಿನ್ನಸಮುದ್ರ, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಟ್ಟಿ ರಾಜು ಇತರರು ಭಾಗವಹಿಸಿದ್ದರು.
- - -(ಕೋಟ್) ಬೇಡಿಕೆಗಳ ಈಡೇರಿಕೆಗಾಗಿ ಇಂದು ಸಾಂಕೇತಿಕವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಬರುವ ಶನಿವಾರ ರಸ್ತೆ ತಡೆ ನಡೆಸಲಾಗುವುದು. ಕಾಯ್ದೆ ಜಾರಿಯಾಗದಿದ್ದಲ್ಲಿ ಮುಂದಿನ ವಾರದಲ್ಲಿ ದಾವಣಗೆರೆ ಬಂದ್ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕಾಗುತ್ತದೆ.
- ಜಿ.ಪ್ರಭುಗೌಡ, ತಾಲೂಕು ಅಧ್ಯಕ್ಷ, ಹರಿಹರ- - -
-15ಎಚ್‍ಆರ್‍ಆರ್01:ಸುಗ್ರೀವಾಜ್ಞೆ ಮೂಲಕ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ಒತ್ತಾಯಿಸಿ ರೈತ ಸಂಘ ಹಾಗು ಹಸಿರು ಸೇನೆ ತಾಲೂಕು ಕಾರ್ಯಕರ್ತರು ಹರಿಹರದಲಲ್ಇ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.