ನಾಗಮೋಹನ್ ದಾಸ್ ಆಯೋಗ ವರದಿ ಜಾರಿ ಮಾಡಿ

| Published : Aug 18 2025, 12:00 AM IST

ಸಾರಾಂಶ

ಆ. 19ರಂದು ಈ ಕುರಿತು ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ವರದಿ ಜಾರಿಯ ಪರವಾಗಿ ನಮ್ಮ ಜಿಲ್ಲೆಯ ಸಚಿವರಾಗಿ ಧ್ವನಿಯತ್ತಬೇಕು. ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪರಿಶಿಷ್ಟ ಜಾತಿಯ ಒಳಮೀಸಲಾತಿ ನೀಡುವ ಸಲುವಾಗಿ ನೇಮಕವಾಗಿದ್ದ ನ್ಯಾ. ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರಿಗೆ ಜಿಲ್ಲಾ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಒಕ್ಕೂಟದ ಅಧ್ಯಕ್ಷ ರಾಮಸಮುದ್ರ ಎಂ. ಶಿವಮೂರ್ತಿ, ನೇತೃತ್ವದಲ್ಲಿ ಒಕ್ಕೂಟದ ಪದಾಧಿಕಾರಿಗಳು ಉಸ್ತುವಾರಿ ಸಚಿವರನ್ನು ಭೇಟಿಯಾಗಿ, ಆ. 19ರಂದು ಈ ಕುರಿತು ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ವರದಿ ಜಾರಿಯ ಪರವಾಗಿ ನಮ್ಮ ಜಿಲ್ಲೆಯ ಸಚಿವರಾಗಿ ಧ್ವನಿಯತ್ತಬೇಕು. ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಕರ್ನಾಟಕ ರಾಜ್ಯದ ಮಾದಿಗ ಜನಾಂಗಕ್ಕೆ ಇನ್ನೂ ಕೂಡ ಸ್ವಾತಂತ್ರ್ಯ ಸಿಕ್ಕಿಲ್ಲ, ನಮ್ಮನ್ನಾಳಿದ ಎಲ್ಲಾ ಸರ್ಕಾರಗಳು ಒಂದಲ್ಲ ಒಂದು ಕಾರಣ ಹೇಳಿ ಒಳ ಮೀಸಲಾತಿ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದೆ. ಕರ್ನಾಟಕದಲ್ಲಿ ಮಾದಿಗ ಜನಾಂಗ ಕಳೆದ 30 ವರ್ಷಗಳಿಂದ ನಿರಂತರವಾಗಿ ಒಳಮೀಸಲಾತಿ ಜಾರಿಗಾಗಿ ಹೋರಾಟ ಮಾಡುತ್ತಿರುವುದು ಇಡೀ ದೇಶಕ್ಕೆ ಗೊತ್ತಿರುವ ವಿಷಯವಾಗಿದೆ ಎಂದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ, ರಾಜಕೀಯವಾಗಿ ಜನಾಂಗ ತೀರ ಹಿಂದುಳಿದಿದೆ. ನಮ್ಮ ಸಮಾಜದ ಹೋರಾಟದ ಫಲವಾಗಿ 2024ರ ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಚಂದ್ರಚೂಡ್ ರವರ ಸಮಿತಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಮಾಡುವಂತೆ ಆಯಾ ರಾಜ್ಯದ ಸರ್ಕಾರಗಳಿಗೆ ಆದೇಶ ನೀಡಿದೆ. ಕರ್ನಾಟಕ ಸರ್ಕಾರ ಎ.ಜೆ. ಸದಾಶಿವ ವರದಿಯಲ್ಲಿ ಎಂಪಿರಿಕಲ್ ಡಾಟಾ ನಿಖರವಾದ ದತ್ತಾಂಶ ಇಲ್ಲವೆಂದು ಮನಗಂಡು ವೈಜ್ಞಾನಿಕವಾಗಿ ಹೊಸ ಸಮಿತಿ ರಚನೆ ಮಾಡಬೇಕೆಂಬ ಉದ್ದೇಶದಿಂದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್‌ರವರ ಆಯೋಗವನ್ನು ನೇಮಕ ಮಾಡಿತ್ತು. ಈ ಆಯೋಗವು ಸುಮಾರು 6 ತಿಂಗಳುಗಳ ಕಾಲ ಪರಿಶಿಷ್ಟ ಜಾತಿಯ 101 ಜಾತಿಗಳ ಸಮೀಕ್ಷೆ ನಡೆಸಿ ತನ್ನ ವರದಿಯನ್ನು ಆ. 4 ರಂದೇ ಸರ್ಕಾರಕ್ಕೆ ನೀಡಿದೆ ಎಂದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಅಧ್ಯಯನ ಮಾಡುವಂತೆ ಪ್ರತಿಯನ್ನು ನೀಡಿದೆ. ಈಗ ಸಚಿವ ಸಂಪುಟ ಸಭೆಯ ಮತ್ತೇ ಆ. 19ಕ್ಕೆ ನಿಗದಿಯಾಗಿದ್ದು, ಸಚಿವರಾದ ತಾವು ಸಭೆಯಲ್ಲಿ ಒಳಮೀಸಲಾತಿಯ ವಿಷಯದ ಪರವಾಗಿ ಮಾತನಾಡಿ ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಸಚಿವ ಸಂಪುಟದ ಗಮನ ಸೆಳೆಯಬೇಕು ಎಂದು ಮುಖಂಡರು ಮನವಿ ಮಾಡಿಕೊಂಡರು.

ಜಿಲ್ಲೆಯ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ ಅವರಿಗೂ ಸಹ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಬಸವನಪುರ ರಾಜಶೇಖರ್, ಹನೂರು ತಾಲೂಕು ಅಧ್ಯಕ್ಷ ಮಹದೇವ್, ಮುಖಂಡರಾದ ಎಚ್.ಎಚ್. ನಾಗರಾಜು, ಹರವೆ ಮಹದೇವಯ್ಯ, ನಾಗೇಶ್, ಗುಂಡ್ಲುಪೇಟೆ ನಾಗಯ್ಯ, ಆರ್.ಎಸ್. ಲಿಂಗರಾಜು, ಮಂಜು ಮುಳ್ಳೂರು, ಸಿದ್ದಲಿಂಗಯ್ಯ, ರಾಜು ಚೆನ್ನಲಿಂಗನ ಹಳ್ಳಿ, ಎಂ.ರಾಜು, ಶಂಕರ್ ಮೂಡಹಳ್ಳಿ, ಬಸವರಾಜು, ಡಿ.ಕೆ. ಶಿವಕುಮಾರ್, ಸಿದ್ದರಾಜು ಬಿಸಲವಾಡಿ , ಚನ್ನಬಸಪ್ಪ, ಸಂಘದ ಅಧ್ಯಕ್ಷ ರಾಚಪ್ಪ, ಎಂ. ಶಿವಕುಮಾರ್ ಸುಂದರ್, ರಂಗಸ್ವಾಮಿ, ಚಿಕ್ಕಮಾದಯ್ಯ, ಮಾಸ್ಟರ್, ಬಸವರಾಜು, ರಾಜೇಶ್ ಮೊದಲಾದವರು ಇದ್ದರು. -----

17ಸಿಎಚ್ಎನ್‌14

ಪರಿಶಿಷ್ಟ ಜಾತಿಯ ಒಳಮೀಸಲಾತಿ ನೀಡುವ ಸಲುವಾಗಿ ನೇಮಕವಾಗಿದ್ದ ನ್ಯಾ. ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರಿಗೆ ಜಿಲ್ಲಾ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.