ಸಾರಾಂಶ
ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಹೊಸಪೇಟೆಅಲ್ಪಸಂಖ್ಯಾತರ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಸಾಧಿಸಲು ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸುವ ಹಾಗೂ ಆರ್ಥಿಕ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಮಾನ ಹಂಚಿಕೆ, ಅಲ್ಪಸಂಖ್ಯಾತರ ಜೀವನ ಮಟ್ಟ ಸುಧಾರಣೆಗಾಗಿ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಾರಿಗೆ ತರಬೇಕಿದೆ. ಅಲ್ಪಸಂಖ್ಯಾತರ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸಲು ಐಸಿಡಿಎಸ್ ಸೇವೆಗಳನ್ನು ಸಮಾನವಾಗಿ ದೊರೆಯುವಂತೆ ಮಾಡಬೇಕು. ಉರ್ದು ಶಿಕ್ಷಣಕ್ಕೆ ಹೆಚ್ಚಿನ ಸಂಪನ್ಮೂಲ ಒದಗಿಸುವುದು ಹಾಗೂ ಶಿಕ್ಷಣ ಸೌಲಭ್ಯ ಕಲ್ಪಿಸುವುದು ಮುಖ್ಯವಾಗಿದೆ. ತಂತ್ರಜ್ಞಾನ ತರಬೇತಿ ಮೂಲಕ ಕೌಶಲ್ಯ ಕಾರ್ಯಕ್ರಮ ತಲುಪಿಸುವುದು. ಆರ್ಥಿಕ ಚಟುವಟಿಕೆ ಬಲಪಡಿಸಲು ಸಾಲ ಸೌಲಭ್ಯ ಕಲ್ಪಿಸುವುದು, ನಾಗರಿಕ ಸೇವೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಅಲ್ಪಸಂಖ್ಯಾತರ ಜೀವನ ಮಟ್ಟ ಸುಧಾರಿಸಲು ವಸತಿ ಯೋಜನೆ ಕಲ್ಪಿಸುವುದು. ಹೀಗೆ ಹಲವು ಕಾರ್ಯಕ್ರಮಗಳು ಬಗ್ಗೆ ನಿರ್ದೇಶನ ನೀಡಿದರು. ೧೫ ಅಂಶಗಳ ಕಾರ್ಯಕ್ರಮಗಳಲ್ಲಿ ಸಂಬಂಧ ಪಡುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಸೌಕರ್ಯ ನೀಡಬೇಕು. ಶಿಕ್ಷಣ ಇಲಾಖೆಯಲ್ಲಿ ಬರುವ ಸಮವಸ್ತ್ರ, ಉಚಿತ ಪಠ್ಯ ಪುಸ್ತಕ ಮತ್ತು ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯ ಕಲ್ಪಿಸಬೇಕು. ಕೃಷಿ ಇಲಾಖೆಯಲ್ಲಿ ಬರುವ ಸೂಕ್ಷ್ಮ ನೀರಾವರಿ, ಕೃಷಿ ಯಾಂತ್ರೀಕರಣ ಮತ್ತು ಬಿತ್ತನೆ ಬೀಜ ವಿತರಣೆಗೆ ಕ್ರಮ ವಹಿಸುವುದು.ತೋಟಗಾರಿಕೆ ಇಲಾಖೆಯಲ್ಲಿ ಬರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜೇನು ಸಾಕಾಣಿಕೆ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ತಾಳೆಬೆಳೆ ಯೋಜನೆ ಅನುಷ್ಟಾನ ಸಹಾಯಧನ ಇನ್ನೂ ಬಾಕಿರುವ ಯೋಜನೆಗಳನ್ನು ನೀಡಬೇಕು ಎಂದು ಹೇಳಿದರು.ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೋಹಮ್ಮದ ಅಲಿ ಅಕ್ರಮ್ ಷಾ, ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶ್ವೇತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಸೇರಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.