ರಾಜಸ್ಥಾನ ಮಾದರಿ ಆರೋಗ್ಯ ಹಕ್ಕು ಜಾರಿಗೊಳಿಸಿ

| Published : Feb 11 2025, 12:47 AM IST

ಸಾರಾಂಶ

ರಾಜ್ಯದಲ್ಲಿ ತಾಯಂದಿರ ಸರಣಿ ಸಾವಿಗೆ ಕಲುಷಿತ, ಕಳಪೆ ಗುಣಮಟ್ಟದ ಔಷಧಿಗಳೇ ಕಾರಣವಾಗಿವೆ. ಔಷಧಿಗಳ ಗುಣಮಟ್ಟ ಖಚಿತಪಡಿಸುವಲ್ಲಿ ಕೆಎಸ್ಎಂಎಸ್‌ಸಿಎಲ್‌ ವಿಫಲವಾಗಿದೆ ಎಂದು ಆರೋಪಿಸಿ, ನಗರದಲ್ಲಿ ಸೋಮವಾರ ಡ್ರಗ್ ಆಕ್ಷನ್ ಫೋರಂ- ಕರ್ನಾಟಕ, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (ಎಸ್‌ಎಎಕೆ), ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ಆರೋಗ್ಯ ಹಕ್ಕಿನ ಜಾಥಾ ನಡೆಸಲಾಯಿತು.

- ಡ್ರಗ್ ಆಕ್ಷನ್ ಫೋರಂ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌, ಎಸ್‌ಎಎಕೆ ಮುಖಂಡರ ಆಗ್ರಹ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ತಾಯಂದಿರ ಸರಣಿ ಸಾವಿಗೆ ಕಲುಷಿತ, ಕಳಪೆ ಗುಣಮಟ್ಟದ ಔಷಧಿಗಳೇ ಕಾರಣವಾಗಿವೆ. ಔಷಧಿಗಳ ಗುಣಮಟ್ಟ ಖಚಿತಪಡಿಸುವಲ್ಲಿ ಕೆಎಸ್ಎಂಎಸ್‌ಸಿಎಲ್‌ ವಿಫಲವಾಗಿದೆ ಎಂದು ಆರೋಪಿಸಿ, ನಗರದಲ್ಲಿ ಸೋಮವಾರ ಡ್ರಗ್ ಆಕ್ಷನ್ ಫೋರಂ- ಕರ್ನಾಟಕ, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (ಎಸ್‌ಎಎಕೆ), ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ಆರೋಗ್ಯ ಹಕ್ಕಿನ ಜಾಥಾ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದ ಪ್ರತಿಭಟನಾನಿರತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಮಹಿಳೆಯರು, ಕಾರ್ಯಕರ್ತರು ನಂತರ ಉಪವಿಭಾಗಾಧಿಕಾರಿ ಕಚೇರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಮುಖಂಡ ಡಾ.ಗೋಪಾಲ ದಾಬಡೆ ಮಾತನಾಡಿ, ರಾಜ್ಯ ಸರ್ಕಾರವು ಮೊದಲು ಕೆಎಸ್‌ಎಂಎಸ್‌ಸಿಎಲ್‌ಗೆ ಪುನರುಜ್ಜೀನಗೊಳಿಸಿ, ಔಷಧ ಗುಣಮಟ್ಟ ಖಾತ್ರಿಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಬಳ್ಳಾರಿ ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ತಾಯಂದಿರ ಸರಣಿ ಸಾವುಗಳು ಜನರನ್ನು ಬೆಚ್ಚಿ ಬೀಳಿಸಿವೆ. ಔಷಧಿಗಳ ಗುಣಮಟ್ಟ ಖಚಿತಪಡಿಸಬೇಕಾದ ಕೆಎಸ್‌ಎಂಎಸ್‌ಸಿಎಲ್‌ ವೈಫಲ್ಯವೇ ತಾಯಂದಿರ ಸಾವಿಗೂ ಕಾರಣ‍ವಾಗಿದೆ ಎಂದು ದೂರಿದರು.

ನೆರಳು ಯೂನಿಯನ್ ಮುಖಂಡ ಕರಿಬಸಪ್ಪ ಮಾತನಾಡಿ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಾಗುವಂತೆ ನೋಡಿಕೊಳ್ಳುವಲ್ಲೂ ಕೆಎಸ್‌ಎಂಎಸ್‌ಸಿಎಲ್ ವಿಫಲವಾಗಿದೆ. ಸರ್ಕಾರಿ ಆಸ್ಪತ್ರೆ ರೋಗಿಯು ಹೊರಗಿನ ಫಾರ್ಮಸಿಗಳಿಂದ ಔಷಧಿಗಳನ್ನು ಖರೀದಿಸಲು ಸೂಚಿಸುವುದು ಮೊದಲು ನಿಲ್ಲಬೇಕು. ಈ ಸಮಸ್ಯೆಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಸಿ, ಹಣಕಾಸು ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ಕೇರಳ, ತಮಿಳುನಾಡು, ರಾಜಸ್ಥಾನ ರಾಜ್ಯಗಳ ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು. ಈ ಮೂರೂ ರಾಜ್ಯಗಳ ತಜ್ಞರು ತಮ್ಮ ರಾಜ್ಯಗಳಲ್ಲಿ ಬದಲಾವಣೆ ತಂದಿದ್ದು, ಇದರಿಂದ ಅಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ದೃಢವಾದ ಔಷಧ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.

ಜಬೀನಾ ಖಾನಂ ಮಾತನಾಡಿ, ಎಸ್‌ಎಂಎಸ್‌ಸಿಎಲ್‌ ಸಮಸ್ಯೆ ಪರಿಹರಿಸುವ ಬದಲು, ಕರ್ನಾಟಕದ ಆರೋಗ್ಯ ಸಚಿವರು "ಡ್ರಗ್ಸ್ ಅಂಡ್ ಕಾಸ್ಮೆಟಿಕ್ ಆಕ್ಟ್ 1940 " ರ ಕಾಯ್ದೆ ಬದಲಾಯಿಸಲು ಮುಂದಾಗಿದ್ದಾರೆ. ಇದು ಫಲಪ್ರದ ಆಗುವುದಿಲ್ಲ, ಬದಲಿಗೆ ಕರ್ನಾಟಕ ಆರೋಗ್ಯ ಸಚಿವರು ಪಾರದರ್ಶಕತೆ ತರುವ ಮೂಲಕ ಕೆಎಸ್‌ಎಂಎಸ್‌ಸಿಎಲ್‌ನ್ನು ಸುಧಾರಿಸಬೇಕು. ತಮಿಳುನಾಡು ವೈದ್ಯಕೀಯ ಸೇವಾ ಕೇಂದ್ರದಂತೆ ತನ್ನ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕ ವ್ಯವಸ್ಥೆ ನಮ್ಮ ರಾಜ್ಯದಲ್ಲೂ ತರಬೇಕೆಂದು ಆಗ್ರಹಿಸಿದರು.

ರಾಜಸ್ಥಾನದ ಆರೋಗ್ಯ ಹಕ್ಕು ಮಸೂದೆಯಲ್ಲಿ ಪ್ರತಿ ವ್ಯಕ್ತಿಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲ ಹಕ್ಕುಗಳಿವೆ. ಅವುಗಳಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಉಚಿತ ಹೊರ ರೋಗಿ ಮತ್ತು ಒಳರೋಗಿ ಚಿಕಿತ್ಸೆ ರೋಗಿ ವಿಭಾಗ ಸೇವೆಗಳು, ಔಷಧಿ ಪಡೆಯುವುದಿದೆ. ಪೂರ್ವ ಪಾವತಿ ಅಥವಾ ಪೊಲೀಸ್ ಅನುಮತಿಗಾಗಿ ಕಾಯದೇ ಎಲ್ಲ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ತುರ್ತು ಚಿಕಿತ್ಸೆ ಮತ್ತು ಆರೈಕೆ ಮಾಡಲು ಅವಕಾಶ ಇದೆ . ಜನಪರವಾದ ರಾಜಸ್ದಾನ ಮಾದರಿ ಈ ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸಲು ಅವರು ಜಬೀನಾ ಖಾನಂ ಒತ್ತಾಯಿಸಿದರು. ಸಂಘಟನೆಯ ಶರೀನ್ ಬಾನು, ಮಹಬೂಬ್‌, ಲಕ್ಷ್ಮೀ, ಡಿ.ವಿ.ವಾಣಿ, ಸೋಫಿಯಾ ಭಾನು, ನಜೀಮಾ ಬಾನು, ಶಬೀನಾ ಬಾನು, ಸಮೀರಾ, ಮುಮ್ತಾಜ್‌, ಆಶಾ, ಶಂಶು, ಮುಬೀನಾ ಬಾನು, ಫಾತಿಮಾ ಬಾನು, ಡಾ.ಗೋಪಾಲ ದಾಬಡೆ ಇತರರು ಇದ್ದರು. - - - -10ಕೆಡಿವಿಜಿ6, 7.ಜೆಪಿಜಿ:

ರಾಜಸ್ಥಾನ ಮಾದರಿ ಆರೋಗ್ಯ ಹಕ್ಕು ಕಾಯ್ದೆ ಜಾರಿ, ಕೆಎಸ್ಎಂಎಸ್‌ಸಿಎಲ್‌ ಗೆ ಪುನಶ್ಚೇತನಕ್ಕೆ ಒತ್ತಾಯಿಸಿ ಸೋಮವಾರ ದಾವಣಗೆರೆಯಲ್ಲಿ ಆರೋಗ್ಯ ಹಕ್ಕಿನ ಜಾಥಾ ನಡೆಯಿತು.