ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಲಕ್ಷ್ಮಿಪ್ರಿಯಾ
ಕನ್ನಡಪ್ರಭ ವಾರ್ತೆ ಕಾರವಾರಘನತ್ಯಾಜ್ಯ ವಿಲೇವಾರಿ 2026ರಲ್ಲಿನ ನಿಯಮಗಳನ್ನು ಸಂಪೂರ್ಣವಾಗಿ ಅರಿತು, ಜಿಲ್ಲೆಯಲ್ಲಿನ ಘನತ್ಯಾಜ್ಯ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿ, ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಾಸ್ಥ್ಯ ಮತ್ತು ಸ್ವಚ್ಚ ಪರಿಸರವನ್ನು ನಿರ್ಮಿಸಲು ಕಾರ್ಯನಿರ್ವಹಿಸುವಂತೆ ಎಲ್ಲಾ ನಗರಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಆಭಿಯಂತರರು, ಆರೋಗ್ಯ ನಿರೀಕ್ಷಕರು ಮತ್ತು ಆರೋಗ್ಯ ಶಾಖೆಯ ಸಿಬ್ಬಂದಿಗೆ ಆಯೋಜಿಸಿದ್ದ ಘನತ್ಯಾಜ್ಯ ನಿಯಮಗಳು-2026 ಮತ್ತು ಸರ್ಕುಲರ್ ಎಕಾನೆಮಿ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯದಲ್ಲಿ ಪ್ರತಿಯೊಬ್ಬ ಅಧಿಕಾರಿ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಕ ಎಂ.ಆರ್.ಎಫ್. ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶೇ. 80ರಷ್ಟು ಅರಣ್ಯ ಪ್ರದೇಶವಿದ್ದು, ಎಸ್.ಟಿ.ಪಿ ಮತ್ತು ಎಫ್.ಎಸ್.ಟಿ.ಪಿ ಗೆ ಭೂಮಿ ಸಮಸ್ಯೆ ಇದ್ದು ಇದನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿದ್ದಿರುವ ಕಸವನ್ನು ವ್ಯವಸ್ಥಿತ ರೀತಿಯಲ್ಲಿ ತೆರವುಗೊಳಿಸುವುದು ಅತ್ಯಂತ ಅಗತ್ಯವಿದ್ದು, ಇದಕ್ಕಾಗಿ ವಿನೂತನ ಯೋಜನೆಯನ್ನು ರೂಪಿಸುವುದು ಅವಶ್ಯಕತೆಯಿದೆ ಎಂದರು.
ಘನತ್ಯಾಜ್ಯ ವಿಲೇವಾರಿ ನಿಯಮಗಳು-2026 ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ಕುರಿತು ನಗರ ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕಾದ ಕರ್ತವ್ಯಗಳ ಬಗ್ಗೆ ಪೌರಾಡಳಿತ ನಿರ್ದೇಶನಾಲಯದ ನಿವೃತ್ತ ಅಧಿಕಾರಿ ರಾಘವೇಂದ್ರ, ಒಣತ್ಯಾಜ್ಯ ವಿಲೇವಾರಿ ಕುರಿತು ನಗರ ಸ್ಥಳೀಯ ಬಗ್ಗೆ ಸಾಹಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಸುದೇಶ್ ಕಿಣಿ, ಎಸ್.ಡಬ್ಲ್ಯೂ.ಎಂ ಅನುಷ್ಠಾನ ಕುರಿತು ಎದುರಿಸುತ್ತಿರುವ ವಾಸ್ತವಿಕ ಸಮಸ್ಯೆಗಳು, ಕುರಿತು ಸ್ವಾವಲಂಬಿಯಾಗಿ ನಿರ್ವಹಣೆ ಮಾಡುವ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಸ್.ಬ್ಲೂ.ಎಂ ಪರಿಣಿತ ಕಾರ್ತಿಕ್ ಆರ್ ನಾಯಕ್, ಗೋವಾದಲ್ಲಿನ ತ್ಯಾಜ್ಯ ವಿಲೆವಾರಿ ಕ್ರಮಗಳ ಬಗ್ಗೆ ಗೋವಾ ವೇಸ್ಟ್ ಮ್ಯಾನೇಜ್ ಮೆಂಟ್ ನ ಡಾ. ರಜತ್ ಚಿತ್ತಾರಿ ವಿವರವಾದ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಮಂಜುನಾಥ ಇದ್ದರು.