ಕೇಂದ್ರ ಸರ್ಕಾರ ನಾರಿಶಕ್ತಿ ಮಹಿಳಾ ಮೀಸಲಾತಿ ಹೆಸರಿನಲ್ಲಿ ರಾಜಕೀಯ ಪಡೆಯಲೆತ್ನಿಸುತ್ತಿದೆ ಎಂದು ಆರೋಪಿಸಿದ ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕಿ ಕೃಪಾ ಆಳ್ವಾ, ಮೊದಲು ಕೇಂದ್ರ ಸರ್ಕಾರವು 2023ರ ಮಹಿಳಾ ಮೀಸಲಾತಿ ಕಾನೂನನ್ನು ಯಾವುದೇ ಷರತ್ತಿಲ್ಲದೆ ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕೇಂದ್ರ ಸರ್ಕಾರ ನಾರಿಶಕ್ತಿ ಮಹಿಳಾ ಮೀಸಲಾತಿ ಹೆಸರಿನಲ್ಲಿ ರಾಜಕೀಯ ಪಡೆಯಲೆತ್ನಿಸುತ್ತಿದೆ ಎಂದು ಆರೋಪಿಸಿದ ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕಿ ಕೃಪಾ ಆಳ್ವಾ, ಮೊದಲು ಕೇಂದ್ರ ಸರ್ಕಾರವು 2023ರ ಮಹಿಳಾ ಮೀಸಲಾತಿ ಕಾನೂನನ್ನು ಯಾವುದೇ ಷರತ್ತಿಲ್ಲದೆ ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣದ ನೆಪದಲ್ಲಿ, ಕ್ಷೇತ್ರ ಪುನರ್ ವಿಂಗಡಣೆ ಕಾಯ್ದೆ ಹಾಗೂ ಕೇಂದ್ರಾಳಿತ ಪ್ರದೇಶಗಳ ಮಸೂದೆಗಳನ್ನು ಜಾರಿಗೆ ತಂದು, ಆ ಮೂಲಕ ತಮ್ಮ ಪಕ್ಷಕ್ಕೆ ಲಾಭವಾಗುವಂತೆ ಯತ್ನಿಸಲಾಗುತ್ತಿದೆ ಎಂದ ಅವರು, 2011ರ ಜನಗಣತಿ ಆಧಾರದಲ್ಲಿ ಭವಿಷ್ಯದ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದರು.ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ 2023ರಲ್ಲಿ ಅಂಗೀಕರಿಸಿದ ಮಹಿಳಾ ಮೀಸಲಾತಿ ಕಾನೂನನ್ನು ವಿಳಂಬಗೊಳಿಸಿರುವುದಕ್ಕೆ ಸ್ಪಷ್ಟನೆ ನೀಡಲಿ ಎಂದರು.ಮಣಿಪುರದಲ್ಲಿ ಮಹಿಳೆಯರ ಮೇಲಿನ ಹಿಂಸೆ, ಬೆಲೆ ಏರಿಕೆ, ಎಲ್‌ಪಿಜಿ ದರ ಹೆಚ್ಚಳ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ, ಮತದಾರರ ಪಟ್ಟಿಯಿಂದ ಮಹಿಳೆಯರ ಹೆಸರು ರದ್ದು ಮಾಡಿರುವುದು ಸೇರಿದಂತೆ ಹಲವು ಸಮಸ್ಯೆಗಳಿದ್ದು ಇವುಗಳ ಕುರಿತು ನರೇಂದ್ರ ಮೋದಿಯವರು ಮೌನ ವಹಿಸಿದ್ದಾರೆ ಎಂದವರು ಆರೋಪಿಸಿದರು.ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು ಮಾತನಾಡಿ, ಕಾಂಗ್ರೆಸ್ ಮಹಿಳಾ ಮೀಸಲಾತಿಗೆ ಹಿಂದೆಯೂ ಬೆಂಬಲ ನೀಡಿತ್ತು, ಮುಂದೆಯೂ ನೀಡುತ್ತದೆ, 80ರ ದಶಕದಲ್ಲಿಯೇ ರಾಜೀವ್ ಗಾಂಧಿ ಮಹಿಳಾ ಮೀಸಲಾತಿಯನ್ನು ಪ್ರಸ್ತಾಪಿಸಿದ್ದರು, ಪಿ.ವಿ. ನರಸಿಂಹ ರಾವ್ ಅವರು ಪ್ರಥಮ ಬಾರಿಗೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದವರು, ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಮಹಿಳೆಯರ ಪರವಾಗಿ ಗ್ಯಾರಂಟಿ ಯೋಜನೆಗಳ‍ನ್ನು ಜಾರಿಗೆ ತಂದಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿತಾ ಡಿಸೋಜ, ರಾಜೀವಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ರಾಜ್ಯ ಸಹಸಂಚಾಲಕಿ ರೋಶನಿ ಒಲಿವೆರಾ ಉಪಸ್ಥಿತರಿದ್ದರು.