ಸಾರಾಂಶ
ಬಳ್ಳಾರಿ: ರಾಜ್ಯದಲ್ಲಿ ಗಣಿಗಾರಿಕೆ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆಯನ್ನು ನಾಲ್ಕು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಲ್ಲಿ ಬಳ್ಳಾರಿ ಜಿಲ್ಲೆ ಕೂಡ ಒಂದಾಗಿದೆ. ಬಳ್ಳಾರಿ ತಾಲೂಕಿನ ಜಾಣೆಕುಂಟೆ-ವೇಣಿ ವೀರಾಪುರ ಹಾಗೂ ಹಲಕುಂದಿ-ಬೆಳಗಲ್ಲು ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮ್ಸ್ ಸಂಸ್ಥೆಯ ಮಹೇಶ್ ಕುಮಾರ್ ಹೇಳಿದರು.
ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಲಿಂಗಸಗೂರಿನ ಗ್ರಾಮ್ಸ್ ಸಂಸ್ಥೆ ಸಹಯೋಗದಲ್ಲಿ ಬಳ್ಳಾರಿ ತಾಲೂಕಿನ ಹಲಕುಂದಿ-ಬೆಳಗಲ್ಲು ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಬರುವ ಹಲಕುಂದಿ ಗ್ರಾಪಂ ಸಭಾಂಗಣದಲ್ಲಿ ಜರುಗಿದ ಗಣಿ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆಯ ಕಾರ್ಯಕಾರಿ ಸಮಿತಿ ರಚನೆ ಸಭೆಯಲ್ಲಿ ಅವರು ಮಾತನಾಡಿದರು.ಹಲಕುಂದಿ ಬೆಳಗಲ್ಲು ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಸುಮಾರು 4,196 ಹೆಕ್ಟೇರ್ ಪ್ರದೇಶಗಳಲ್ಲಿ ಈ ಯೋಜನೆಯ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 6 ಹಳ್ಳಿಗಳು ಈ ಯೋಜನೆಯಡಿ ಬರುತ್ತವೆ ಎಂದು ತಿಳಿಸಿದರು. ಮುಖ್ಯವಾಗಿ ಈ ಯೋಜನೆಯಡಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಲು ರೈತರ ಜಮೀನುಗಳಿಗೆ ಉಪಚಾರಗಳನ್ನು ಮಾಡುವುದು, ಮಳೆಯ ಹಸಿರುಯುತ ಭೂಮಿಯ ಉತ್ಪಾದಕತೆ ಸಾಮರ್ಥ್ಯ ಹೆಚ್ಚಿಸುವುದಾಗಿದೆ ಎಂದರು.
ಯೋಜನಾ ವ್ಯಾಪ್ತಿಯ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಪುನಶ್ಚೇತನಗೊಳಿಸುವುದು ಮತ್ತು ನೀರಿನ ಮಟ್ಟ ಸುಧಾರಣೆಯಾಗುವಂತೆ ಕ್ರಮವಹಿಸುವುದು. ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಮಾಡುವ ಮುಖಾಂತರ ಮಣ್ಣಿನ ಸವಕಳಿ ತಡೆಗಟ್ಟುವುದು. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಕೃಷಿ ಚಟುವಟಿಕೆ ಬಳಕೆಗಾಗಿ ಮಳೆ ನೀರು ಕೊಯ್ಲು ರಚನೆಗಳ ಮೂಲಕ ನೀರನ್ನು ಸಂರಕ್ಷಣೆ ಮಾಡುವುದು. ಕೃಷಿ ಉತ್ಪಾದನೆಯನ್ನು ಸುಸ್ಥಿರಗೊಳಿಸುವುದು ಹಾಗೂ ರೈತ ಸಮುದಾಯದ ಜೀವನ ಮಟ್ಟವನ್ನು ಸುಧಾರಣೆ ಮಾಡುವುದಾಗಿದೆ ಎಂದು ತಿಳಿಸಿದರು.ಮುಖ್ಯವಾಗಿ ಆದಾಯ ಉತ್ಪನ್ನ ಚಟುವಟಿಕೆಯನ್ನು ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಮತ್ತು ಆರ್ಥಿಕತೆ ಹೆಚ್ಚಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೃಷಿ ಅಧಿಕಾರಿ ಬಸವರಾಜ್ ಮಾತನಾಡಿ, ಜಲಾನಯನ ಸಮಿತಿಯು ಈ ಯೋಜನೆಯ ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ದಾಖಲೆ ನಿರ್ವಹಣೆ ಮಾಡಲು ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.ಜಲಾನಯನ ಸಮಿತಿಯು ಗ್ರಾಪಂಗೆ ಒಂದರಂತೆ ಇದ್ದು, ಇದರಲ್ಲಿ ಗ್ರಾಪಂ ಅಧ್ಯಕ್ಷರೇ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಮತ್ತು ಯೋಜನಾ ವ್ಯಾಪ್ತಿಯ ಗ್ರಾಮಗಳಲ್ಲಿಯ ಇಬ್ಬರು ಚುನಾಯಿತ ಗ್ರಾಪಂ ಸದಸ್ಯರು ಈ ಸಮಿತಿಗೆ ಸದಸ್ಯರಾಗಿರುತ್ತಾರೆ. ಜತೆಗೆ ಸ್ವಸಹಾಯ ಗುಂಪಿನ ಮಹಿಳೆಯರು ಎರಡರಿಂದ ಮೂರು ಜನ ಪ್ರತಿನಿಧಿಗಳು ಮತ್ತು ಬಳಕೆದಾರ ಗುಂಪುಗಳಿಂದ ಮೂರರಿಂದ ನಾಲ್ಕು ಜನ ಪ್ರತಿನಿಧಿಗಳು ಮತ್ತು ಸರಕಾರೇತರ ಸಂಸ್ಥೆ ಪ್ರತಿನಿಧಿಗಳು ಇಬ್ಬರು ಹಾಜರಾಗಿರುತ್ತಾರೆ ಹಾಗೂ ಸಂಬಂಧಿಸಿದ ಕೃಷಿ ಅಧಿಕಾರಿಗಳು ಈ ಒಂದು ಸಮಿತಿಗೆ ಖಜಾಂಚಿ ಅಥವಾ ಕಾರ್ಯದರ್ಶಿಗಳಾಗಿರುತ್ತಾರೆ ಎಂದು ಅವರು ವಿವರಿಸಿದರು.
ಜತೆಗೆ ಪ್ರತಿ ವರ್ಷ ಕೂಡ ಶೇ. 20ರಷ್ಟು ಕಾರ್ಯಕಾರಿ ಸಮಿತಿ ಸದಸ್ಯರು ಬದಲಾಗುತ್ತಿರುತ್ತಾರೆ. ಶೇ. 18ರಷ್ಟು ಪ.ಜಾತಿ ಮತ್ತು ಪ.ಪಂಗಡದ ಸದಸ್ಯರು ಜಲಾನಯನ ಸಮಿತಿಯಲ್ಲಿ ಇರುತ್ತಾರೆ ಎಂದು ತಿಳಿಸಿದರು.ಬಳಿಕ ಹಲಕುಂದಿ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು, ಅನುಷ್ಠಾನ ಸಂಸ್ಥೆಯ ಸಿಇಒ ಮತ್ತು ಉಪಜಲಾನಯನ ಯೋಜನೆಯ ತಂಡದ ನಾಯಕರು, ಐಜಿಎ ಪರಿಣತರು, ಜಲಾನಯನ ಸಹಾಯಕರು, ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು, ಬಳಕೆದಾರ ಗುಂಪಿನ ರೈತ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.