ಯಾದಗಿರಿ ಜಿಲ್ಲೆಯಲ್ಲಿ ಎನಿವೇರ್ ನೋಂದಣಿ ಜಾರಿ: ಹಳ್ಳೆ

| Published : Sep 02 2024, 02:05 AM IST

ಯಾದಗಿರಿ ಜಿಲ್ಲೆಯಲ್ಲಿ ಎನಿವೇರ್ ನೋಂದಣಿ ಜಾರಿ: ಹಳ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ಎನಿವೇರ್ ನೋಂದಣಿ ವ್ಯವಸ್ಥೆಯು ಸಾರ್ವಜನಿಕರಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದ್ದು, ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆ ಹೆಚ್ಚಿಸುತ್ತದೆ ಅಲ್ಲದೆ ವಿಳಂಬತೆ ತಡೆಗಟ್ಟುತ್ತದೆ

ಕನ್ನಡಪ್ರಭ ವಾರ್ತೆ ಶಹಾಪುರ

ಪ್ರಸ್ತುತ ಸಾರ್ವಜನಿಕರು ಸ್ಥಿರಾಸ್ತಿ ಇರುವ ವ್ಯಾಪ್ತಿಯ ಉಪ ನೋಂದಣಿ ಕಚೇರಿಯಲ್ಲಿ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲು ಅವಕಾಶವಿತ್ತು, ಆದರೆ ಎನಿವೇರ್ (ಎಲ್ಲಿಯಾದರೂ) ಜಾರಿ ನಂತರ ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪ ನೋಂದಣಿ ಕಚೆರಿಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ತಹಸೀಲ್ದಾರ್ ಉಮಾಕಾಂತ ಹಳ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನಿವೇರ್ ನೋಂದಣಿ ವ್ಯವಸ್ಥೆಯು ಸಾರ್ವಜನಿಕರಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದ್ದು, ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆ ಹೆಚ್ಚಿಸುತ್ತದೆ ಅಲ್ಲದೆ ವಿಳಂಬತೆ ತಡೆಗಟ್ಟುತ್ತದೆ. ಹೀಗಾಗಿ ಸಾರ್ವಜನಿಕರು ಜಿಲ್ಲಾದ್ಯಂತ ತಮಗೆ ಸುಲಭವಾಗುವ ನೋಂದಣಿ ಕಚೇರಿ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಸಮಯ ಉಳಿಯುತ್ತದೆ. ಕಚೇರಿಯಲ್ಲಿ ಜನದಟ್ಟಣೆ ಕಡಿಮೆಯಾಗಲಿದ್ದು, ಸಿಬ್ಬಂದಿ ಕೆಲಸದ ಒತ್ತಡವು ಕಡಿಮೆಯಾಗಲಿದೆ. ಕಾರಣ ನಾಗರಿಕರು ಜಿಲ್ಲೆಯಲ್ಲಿ ತಮಗೆ ಸಮೀಪದ ನೋಂದಣಿ ಕಚೇರಿಯ ಆಯ್ಕೆ ಮಾಡಿಕೊಳ್ಳುವ ಮೂಲಕ ಎನಿವೇರ್ ನೋಂದಣಿಯ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈ ಮೊದಲು ರಾಜ್ಯದ ಬೆರಳಣಿಕೆ ಜಿಲ್ಲೆಯಲ್ಲಿ ಮಾತ್ರ ಎನಿವೇರ್ ನೋಂದಣಿ ಜಾರಿಗೊಳಿಸಲಾಗಿತ್ತು. ಪ್ರಸ್ತುತ 2024-25ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ ಎಂದು ಸರ್ಕಾರ ಘೋಷಣೆ ಮಾಡಿದೆ ಎಂದು ವಿವರಿಸಿದ್ದಾರೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಲ್ಲರೂ ಸದ್ಬಳಿಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.