ಸಾರಾಂಶ
ಸಂಸದ ಗೋವಿಂದ ಕಾರಜೋಳ ಅಭಿಮತ । ಬಸವ ಜಯಂತಿ, ತರಳಬಾಳು ಮಠದ ಶಿವಕುಮಾರ ಶ್ರೀಗಳ 111ನೇ ಜಯಂತಿಕನ್ನಡಪ್ರಭ ವಾರ್ತೆ ಹೊಸದುರ್ಗ
ಬಸವೇಶ್ವರರು ಬಾಳಿ ಹೋದ 900 ವರ್ಷಗಳ ನಂತರವೂ ಅವರ ವಿಚಾರಧಾರೆಗಳನ್ನು ಸಿರಿಗೆರೆ ಮತ್ತು ಸಾಣೇಹಳ್ಳಿ ಮಠಗಳು ಅನುಷ್ಠಾನಕ್ಕೆ ತರುತ್ತಿವೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.ಸಾಣೆಹಳ್ಳಿಯ ಎಸ್.ಎಸ್.ರಂಗಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ತರಳಬಾಳು ಮಠದ ಹಿರಿಯ ಗುರುಗಳಾದ ಶಿವಕುಮಾರ ಸ್ವಾಮೀಜಿಯವರ 111ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಿರಿಗೆರೆ ಮತ್ತು ಸಾಣೇಹಳ್ಳಿ ಮಠಗಳು ಜನರ ಕಲ್ಯಾಣಕ್ಕಾಗಿ ಸ್ಥಾಪನೆಗೊಂಡು ಆ ಕೆಲಸ ಮಾಡುತ್ತಿವೆ. ಕರ್ನಾಟಕದಲ್ಲಿ ಇರುವ ಅನೇಕ ಮಠಗಳಿಗೆ ಇವು ಮಾದರಿಯಾಗಿವೆ. ಈ ಎರಡೂ ಮಠಗಳು ಬಸವಣ್ಣನವರು ಬಯಸಿದಂತಹ ಸುಂದರ ಸಮಾಜ ನಿರ್ಮಾಣ ಮಾಡುವ ಗುರಿಯನ್ನಿಟ್ಟುಕೊಂಡು ಮುಂದುವರೆದಿವೆ.‘ಮನುಷ್ಯ ಜಾತಿ’ ಒಂದು ಎನ್ನುವ ತತ್ವ ಸಿದ್ಧಾಂತಗಳನ್ನಿಟ್ಟುಕೊಂಡು ಎಲ್ಲ ವರ್ಗದವರಿಗೂ ಅನ್ನ, ಅಕ್ಷರ, ಆಶ್ರಯ ದಾಸೋಹವನ್ನು ನೀಡುವಂಥ ಶ್ರೇಷ್ಠ ಮಠಗಳಿವು. ಈ ಮಠಗಳಲ್ಲಿ ನಡೆಯುವಂಥ ಕಾರ್ಯಕ್ರಮಗಳಿಗೆ ಹೆಚ್ಚು ಬೆಂಬಲ ನೀಡುವುದರ ಜೊತೆಗೆ ವರ್ಣರಹಿತ, ವರ್ಗರಹಿತ, ಜಾತಿರಹಿತ ಸುಂದರ ಸಮಾಜಕ್ಕೆ ನಾವೆಲ್ಲವೂ ಕೈಜೋಡಿಸೋಣ ಎಂದು ಹೇಳಿದರು.
ಈಗಾಗಲೇ ಪಂಡಿತಾರಾಧ್ಯ ಶ್ರೀಗಳ ಜೊತೆಗೆ ಮಾತನಾಡಿದಂತೆ ಕೇಂದ್ರ ಸರಕಾರದಿಂದ ಅನುದಾನ ಪಡೆದುಕೊಂಡು ನೀರಾವರಿ ಯೋಜನೆಗೆ ನಿರಂತರವಾಗಿ ಪ್ರಯತ್ನವನ್ನು ಮಾಡ್ತಾ ಇದ್ದೇನೆ. ಎಲ್ಲ ಕ್ಷೇತ್ರಗಳು ನೀರಾವರಿ ಆದರೆ ಮಾತ್ರ ಜನರ ಕಲ್ಯಾಣ ಸಾಧ್ಯ ಎಂದರು.ಸಮಾರಂಭದಲ್ಲಿ ಆಶೀರ್ವಚನ ನೀಡಿದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒಂದು ಪೀಠದ ಗುರುವಾಗಿ ಹೇಗೆ ಸಮಾಜವನ್ನು ಮುನ್ನೆಡೆಸಬೇಕೆಂದು ತೋರಿಸಿಕೊಟ್ಟವರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು. ಬಸವಣ್ಣನವರ ಹಾದಿಯಲ್ಲೇ ಶ್ರೀ ಶಿವಕುಮಾರ ಶ್ರೀಗಳು ನಡೆದವರು. ಶ್ರೀಗಳು ಮುಳ್ಳಿನ ಹಾಸಿಗೆಯನ್ನೇ ಹೂವಿನ ಹಾಸಿಗೆಯನ್ನಾಗಿ ಮಾಡಿಕೊಂಡವರು. ಎಲ್ಲ ದುಷ್ಟ ಶಕ್ತಿಗಳನ್ನು ಧೈರ್ಯದಿಂದ, ತಾಯ್ತನದಿಂದ ಹೆದರಿಸಿದವರು. ಅವರ ಬದುಕಿಗೆ ಶಕ್ತಿ ತುಂಬಿದ್ದು ಬಸವಾದಿ ಶರಣರ ವಚನ ಸಾಹಿತ್ಯ. ಅವರು ಯಾವ ಕೆಲಸವನ್ನೂ ಪ್ರದರ್ಶನಕ್ಕಾಗಿ ಮಾಡಿದವರಲ್ಲ. ಆತ್ಮದರ್ಶನಕ್ಕಾಗಿ ಮಾಡಿಕೊಂಡವರು ಎಂದು ಬಣ್ಣಿಸಿದರು.
ಶಿವಕುಮಾರ ಶ್ರೀಗಳ ವ್ಯಕ್ತಿತ್ವದಿಂದ ನಮ್ಮೆಲ್ಲರ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ಅವರ ಸಾಮಾಜಿಕ ಕಳಕಳಿಯ ಮೂಲಕ ಇನ್ನು ಚಿರಂಜೀವಿಗಳಾಗಿದ್ದಾರೆ. ಶಿವಕುಮಾರ ಸ್ವಾಮಿಗಳು ಇದ್ದದ್ದನ್ನು ಇದ್ದ ಹಾಗೆ ಹೇಳುವಂಥವರು. ‘ನ್ಯಾಯ ನಿಷ್ಠುರಿ ದಾಕ್ಷಿಣ್ಯ ಪರ ನಾನಲ್ಲ ಲೋಕ ವಿರೋಧಿ ಶರಣ ಆರಿಗೂ ಅಂಜುವವನಲ್ಲ’ ಎನ್ನುವ ಮಾತಿಗೆ ಅನುಗುಣವಾಗಿ ಬಾಳಿ ಬದುಕಿ ಸಮಾಜವನ್ನು ಬಹು ಎತ್ತರಕ್ಕೆ ಬೆಳೆಸಿದವರು. ಕರ್ನಾಟಕದಲ್ಲೇ ಕ್ರಾಂತಿಮಾಡಿದ ಗುರುಳೆಂದು ಹೆಸರಾದವರು ಎಂದು ಹೇಳಿದರು.ನಮ್ಮ ಗುರುಗಳಿಗೆ ಅತ್ಯಂತ ಪ್ರಿಯವಾದ ವ್ಯಕ್ತಿ ಬಸವಣ್ಣ. ಬಸವಣ್ಣನವರಿಗಾಗಿ ತಮ್ಮ ತನು, ಮನ ಎಲ್ಲವನ್ನು ಸವೆಸಿಕೊಳ್ಳುವ ಗುಣ ಅವರಲ್ಲಿತ್ತು. ಯಾವಾಗಲೂ ಬಸವ ತತ್ವವನ್ನು ಪ್ರಚಾರ ಮಾಡಲಿಕ್ಕಾಗಿ ಅನೇಕ ರೀತಿಯ ಪ್ರಯೋಗಗಳನ್ನು ಮಾಡಿದರು. ಅಣ್ಣನ ಬಳಗ, ಅಕ್ಕನ ಬಳಗ, ಕಲಾಸಂಘ, ಪುಸ್ತಕ ಪ್ರಕಟಣೆ, ಶಿಕ್ಷಣ ಸಂಸ್ಥೆಗಳ ಪ್ರಾರಂಭ ಮಾಡಿದರು. ಅಂತಹ ಪೂಜ್ಯರು ನಮ್ಮ ಸಮಾಜಕ್ಕೆ ಸಿಕ್ಕಿದ್ದು ನಮ್ಮ ಸೌಭಾಗ್ಯ ಎಂದು ಶ್ರೀಗಳು ತಿಳಿಸಿದರು.
ಶ್ರೀ ಬಿ.ಪಿ.ಓಂಕಾರಪ್ಪ, ಆದ್ರಿಕಟ್ಟೆ ಬಸವರಾಜಪ್ಪ, ಗುರುಮಹಂತೇಶ್ವರ ಮಠದ ಅಕ್ಕಮಹಾದೇವಿ ಮಾತಾಜಿ ಮಾತನಾಡಿದರು.ವೇದಿಕೆಯ ಮೇಲೆ ಹೊಳಲ್ಕೆರೆಯ ಮಾಜಿ ಶಾಸಕ ಪಿ.ರಮೇಶ್ ಉಪಸ್ಥಿತರಿದ್ದರು.
ಆರಂಭದಲ್ಲಿ ಶಿವಸಂಚಾರ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರು ಶಿವಕುಮಾರ ಸ್ವಾಮೀಜಿಯವರ ಜೀವನಾಧಾರಿತ ನಾಟಕ ‘ಮಹಾಬೆಳಗು’ ಪ್ರದರ್ಶಿಸಿದರು.ಬೆಳಗ್ಗೆ ಬಸವಣ್ಣ ಹಾಗೂ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರತಿಮೆಗಳ ಮೆರವಣಿಗೆ ಎತ್ತಿನ ಗಾಡಿಯ ಮೂಲಕ ಸಾಣೇಹಳ್ಳಿ ಗ್ರಾಮದ ಬೀದಿಗಳಲ್ಲಿ ನಡೆಯಿತು. ನಂತರ ಶ್ರೀ ಶಿವಕುಮಾರ ಸ್ವಾಮೀಜಿ ರಥವನ್ನು ಹಳೆ ಮಠದಿಂದ ಹೊಸ ಮಠದವರೆಗೆ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಎಳೆದರು.