ಸಾರಾಂಶ
ಜೆ.ಎನ್.ಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪರಿಸರ ಜಾಗೃತಿಯಲ್ಲಿ ಡಾ.ಎಚ್.ಕೆ.ಎಸ್.ಸ್ವಾಮಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಾಮಗಳ ಉದ್ದಾರಕ್ಕೆ ಗಾಂಧಿ ತತ್ವಗಳ ಅಳವಡಿಕೆ ಅಗತ್ಯವೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್ ಸ್ವಾಮಿ ಪ್ರತಿಪಾದಿಸಿದರು.ಚಿತ್ರದುರ್ಗ ತಾಲೂಕಿನ ಜೆ.ಎನ್ ಕೋಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತದಲ್ಲಿರುವ 7 ಲಕ್ಷ ಹಳ್ಳಿಗಳಲ್ಲಿ ಪರಿಸರ ಉಳಿಸುವುದರ ಜೊತೆಗೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ, ಜನರಲ್ಲಿ ಉದ್ಯೋಗ ಸೃಷ್ಟಿಸಿ ಅವರ ಬದುಕಿಗೊಂದು ಆಸರೆ ನೀಡುವಂತಹ ಶಿಕ್ಷಣದ ಅಗತ್ಯವಿದೆ. ಗಾಂಧಿ ತತ್ವಗಳು ಮಾತ್ರ ಇಂತಹ ಕೆಲಸ ಮಾಡುತ್ತವೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಓದಿನ ಜೊತೆ ಜೊತೆಗೆ, ಗ್ರಾಮಗಳಲ್ಲಿರುವ ವೈವಿಧ್ಯಮಯ ಗುಡಿ ಕೈಗಾರಿಕೆಗಳ ಪರಿಚಯಿಸಿಕೊಡಬೇಕು. ಅದರಲ್ಲಿ ಗಾಂಧೀಜಿಯವರ ಚರಕವನ್ನ ಸೂರ್ಯನಂತೆ ಮಧ್ಯದಲ್ಲಿಟ್ಟು, ಬೇರೆ ಉದ್ಯೋಗಗಳನ್ನ ಗ್ರಹಗಳಂತೆ ಪರಿಚಯ ಮಾಡಿಕೊಳ್ಳಬೇಕು. ಮಕ್ಕಳಲ್ಲಿರುವ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಈ ರೀತಿ ಗ್ರಾಮೀಣ ಕೌಶಲಗಳು ಹೆಚ್ಚು ಸಹಕಾರಿಯಾಗಿದೆ ಎಂದರು.ಪ್ಲಾಸ್ಟಿಕ್ ಮರುಬಳಕೆ , ಕಸದಿಂದ ರಸ ತೆಗೆಯುವುದು, ವಸ್ತುಗಳನ್ನ ಮಿತ ಬಳಕೆ ಬಗ್ಗೆ ಶಾಲಾ ಮಕ್ಕಳು ಸಣ್ಣ ವಯಸ್ಸಿನಲ್ಲಿ ಇದ್ದಾಗಲೇ ಬೋಧನೆ ಆಗಬೇಕು, ಶಿಕ್ಷಣದಲ್ಲಿ ನ್ಯೂನತೆ ಇರುವುದರಿಂದ ಜನರಿಗೆ ಪರಿಸರ ಸ್ನೇಹ ಜೀವನ ಮಾಡಲು ತೊಂದರೆ ಆಗುತ್ತಿದೆ. ಎಲ್ಲವನ್ನು ಶಿಕ್ಷಣದ ಮೂಲಕವೇ ಜನರಲ್ಲಿ ಪರಿವರ್ತನೆ ಮಾಡಿ ಕೊಟ್ಟಾಗ ಮಾತ್ರ ಪರಿಸರ ಉಳಿಸಲು ಸಹಕಾರಿಯಾಗುತ್ತದೆ ಎಂದರು.
ಮಕ್ಕಳಿಗೆ ವಿವಿಧ ಆಟ ಸಾಮಾನುಗಳು ಮುಖಾಂತರ, ಕಡಿಮೆ ವೆಚ್ಚದ ಮಾದರಿಗಳನ್ನ ತಯಾರಿಸಿ ಪ್ರದರ್ಶಿಸುವುದರಿಂದ, ಮಕ್ಕಳಲ್ಲಿ ರಚನಾತ್ಮಕ ಕಾರ್ಯಕ್ರಮಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳು ಹೆಚ್ಚಾಗುತ್ತದೆ. ಪ್ರತಿ ಮಗುವನ್ನು ಸಂಪೂರ್ಣ ಶಿಕ್ಷಣಕ್ಕೆ ತೊಡಗಿಸಿದಾಗ, ಮುಂದೆ ಅವರು ದೇಶ ಸೇವೆ , ಸಮಾಜ ಸೇವೆ ಮಾಡಲು ಸಿದ್ಧರಾಗುತ್ತಾರೆ ಎಂದರು.ಸಹ ಶಿಕ್ಷಕದ ರಾಜಾನಾಯಕ್ ಮಾತನಾಡಿ,ಕಸದಿಂದ ರಸ ಮಾಡುವ ಯಾವುದೇ ವಸ್ತುಗಳನ್ನು ಬಿಸಾಡುವ ಮುಂಚೆ ಅವುಗಳನ್ನು ಮರುಬಳಕೆ ಮಾಡುವುದರ ಬಗ್ಗೆ ವಿದ್ಯಾರ್ಥಿಗಳು ಯೋಚಿಸುವಂತಾಗಬೇಕು. ಪರಿಸರದ ಮೇಲೆ ಆಗುತ್ತಿರುವ ಅನಾಹುತಗಳನ್ನ ಅಧ್ಯಯನ ಮಾಡಿ ಪ್ಲಾಸ್ಟಿಕ್ ಮರುಬಳಕೆ ಮಾಡುವುದರ ಬಗ್ಗೆ ಜನ ಜಾಗೃತಿ ಮೂಡಿಸಬೇಕು ಎಂದರು.
ಮುಖ್ಯ ಶಿಕ್ಷಕಿ ಮಮ್ತಾಜ್ ಮಾತನಾಡಿ,ಗಾಂಧೀಜಿಯವರ ಚಿಂತನೆಗಳನ್ನ ಜನಜಾಗೃತಿಗೊಳಿಸಬೇಕು. ಭಾರತದ ಅಭಿವೃದ್ಧಿ ಗ್ರಾಮೀಣ ಜನರ ಅಭಿವೃದ್ಧಿಯ ಮೇಲೆ ನಿಂತಿದೆ. ಗ್ರಾಮಗಳ ಉದ್ದಾರದಿಂದ ಮಾತ್ರ ನಾವು ನಿಜವಾದ ಸ್ವರಾಜ್ಯ ಗಳಿಸಲು ಸಾಧ್ಯ. ಗ್ರಾಮಸ್ಥರು ಗುಡಿ ಕೈಗಾರಿಕೆಗಳನ್ನು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿ ಸ್ವಉದ್ಯೋಗ ಗಳಲ್ಲಿ ತೊಡಗಿಕೊಳ್ಳಬೇಕೆಂದು ವಿನಂತಿಸಿಕೊಂಡರುಸಹ ಶಿಕ್ಷಕರಾದ ಹಾಲೇಶಪ್ಪ, ಶ್ರೀನಿವಾಸ್, ಗಿರೀಶ್ ಬಾಬು, ಮಂಜಣ್ಣ, ಶಶಿಕಲಾ, ಹಾಲಸ್ವಾಮಿ, ರೇವಣ್ಣ,ಮಂಜಮ್ಮ ಮತ್ತಿತರರು ಹಾಜರಿದ್ದರು. ಇದೇ ವೇಳೆ ಶಾಲಾ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.