ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ಅನುಷ್ಠಾನವಾಗಲಿ-ಸಾಳುಂಕೆ

| Published : Nov 23 2024, 12:32 AM IST

ಸಾರಾಂಶ

ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 3 ಮೀಸಲಾತಿ ಕಲ್ಪಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕ್ರೀಡಾಪಟುಗಳ ನೇಮಕಾತಿ ಆಗಬೇಕು ಎಂದು ಎಸ್‌ಜೆಜೆಎಂ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಾಳುಂಕೆ ಹೇಳಿದರು.

ಬ್ಯಾಡಗಿ: ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 3 ಮೀಸಲಾತಿ ಕಲ್ಪಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕ್ರೀಡಾಪಟುಗಳ ನೇಮಕಾತಿ ಆಗಬೇಕು ಎಂದು ಎಸ್‌ಜೆಜೆಎಂ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಾಳುಂಕೆ ಹೇಳಿದರು.

ನ. 24ರಿಂದ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಆರಂಭವಾಗಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಎಸ್‌ಜೆಜೆಎಂ ಪದವಿ ಪೂರ್ವ ಕಾಲೇಜು ತಂಡದ ಆಟಗಾರ್ತಿಯರಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಸ್ವಾಮ್ಯದ ಹುಬ್ಬಳ್ಳಿ ರೈಲ್ವೆ, ಕೆಪಿಟಿಸಿಎಲ್, ರಾಜ್ಯ ಪೊಲೀಸ್‌ ಇಲಾಖೆ, ಖಾಸಗಿ ಕಂಪನಿಗಳಾದ ಬಿಇಎಲ್, ಐಟಿಐ, ಎಚ್ಎಂಟಿ ಮತ್ತೆ ಕಬಡ್ಡಿ ತಂಡಗಳನ್ನು ಪುನರಾರಂಭಿಸಿಲ್ಲ ಎಂದು ಹೇಳಿದರು.

ಕಳೆದೊಂದು ದಶಕದಿಂದ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳಲ್ಲಿಯೇ ಕಬಡ್ಡಿ ಕ್ರೀಡಾಪಟುಗಳ ನೇಮಕವಾಗಿಲ್ಲ. ಅದರಲ್ಲೂ ಮಹಿಳಾ ಆಟಗಾರ್ತಿಯರಿಗೆ ಇರುವ ಏಕೈಕ ಅವಕಾಶ, ರಾಜ್ಯ ಪೊಲೀಸ್‌ ತಂಡ ಎರಡು ದಶಕಗಳಿಂದ ಕ್ರೀಡಾಪಟುಗಳು ನೇಮಕವಾಗಿಲ್ಲ ಎಂದರು.

ಇತಿಹಾಸ ಪುನರಾವರ್ತನೆಯಾಗಲಿ: ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೇಶೀಮಿ ಮಾತನಾಡಿ, 2006ರಲ್ಲಿ ದೈಹಿಕ ನಿರ್ದೇಶಕಿ ಡಾ. ಭರಣಿ ದ್ಯಾವನೂರ ನೇತೃತ್ವದ ಎಸ್‌ಜೆಜೆಎಂ ಪದವಿ ಪೂರ್ವ ಕಾಲೇಜು (ಹಾವೇರಿ ಜಿಲ್ಲೆ) ಪುರುಷರ ತಂಡ ರಾಜ್ಯಮಟ್ಟದಲ್ಲಿ ವಿಜೇತರಾಗಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿತ್ತು. ಪ್ರಸಕ್ತ ಮಹಿಳಾ ತಂಡ ಕೋಚ್ ಮಂಜುಳಾ ಭಜಂತ್ರಿ ನೇತೃತ್ವದಲ್ಲಿ ಸಿದ್ಧವಾಗಿದ್ದು, ಇತಿಹಾಸ ಪುನರಾವರ್ತನೆಯಾಗಲಿ ಎಂದರು.

ಸಮವಸ್ತ್ರ ನೀಡಿದ ಆರ್.ಜಿ. ಪಾಟೀಲ ಮತ್ತು ಕಂ., ಅನ್ಸಾರಿ ಟ್ರೇಡರ್ಸ್, ಎಸ್.ಆರ್. ಅಸೋಸಿಯೇಟ್ಸ್ ಅವರಿಗೆ ಪ್ರಾಚಾರ್ಯ ಡಾ. ಮಾಲತೇಶ ಬಂಡೆಪ್ಪನವರ ಅಭಿನಂದನೆ ಸಲ್ಲಿಸಿದರು. ಪುರಸಭೆ ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ವೀರೇಶ ಮತ್ತೀಹಳ್ಳಿ, ನಿಂಗಪ್ಪ ಆಡಿನವರ ಉಪಸ್ಥಿತರಿದ್ದರು.