ಕಸ್ತೂರಿ ರಂಗನ್ ವರದಿ ಜಾರಿ, ಒತ್ತುವರಿ ತೆರವು ಆತಂಕದಲ್ಲಿ ಜನತೆ

| Published : Sep 25 2024, 12:57 AM IST

ಕಸ್ತೂರಿ ರಂಗನ್ ವರದಿ ಜಾರಿ, ಒತ್ತುವರಿ ತೆರವು ಆತಂಕದಲ್ಲಿ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಲ್ಲಿರುವ ಶೃಂಗೇರಿ ತಾಲೂಕಿನ ಬಹುತೇಕ ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿದ್ದು, ಕಸ್ತೂರಿ ರಂಗನ್ ವರದಿ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಇನ್ನೊಂದೆಡೆ ಒತ್ತುವರಿ ತೆರವು ಆದೇಶ. ಇವೆರೆಡು ತಾಲೂಕಿನ ಜನರ ನಿದ್ದೆಗೆಡಿಸುತ್ತಿದ್ದು , ತಲೆ ತಲಾಂತರದಿಂದ ಬದುಕು ಕಟ್ಟಿಕೊಂಡು ಬಂದಿರುವ ಕಾಡಂಚಿನ ಜನರ ಬದುಕಿನ ಮೇಲೆ ಕಸ್ತೂರಿ ರಂಗನ್ ವರದಿ, ತೂಗುಕತ್ತಿ ಬೀಸುತ್ತಿದೆ.

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ ಶೃಂಗೇರಿ

ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಲ್ಲಿರುವ ಶೃಂಗೇರಿ ತಾಲೂಕಿನ ಬಹುತೇಕ ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿದ್ದು, ಕಸ್ತೂರಿ ರಂಗನ್ ವರದಿ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಇನ್ನೊಂದೆಡೆ ಒತ್ತುವರಿ ತೆರವು ಆದೇಶ. ಇವೆರೆಡು ತಾಲೂಕಿನ ಜನರ ನಿದ್ದೆಗೆಡಿಸುತ್ತಿದ್ದು , ತಲೆ ತಲಾಂತರದಿಂದ ಬದುಕು ಕಟ್ಟಿಕೊಂಡು ಬಂದಿರುವ ಕಾಡಂಚಿನ ಜನರ ಬದುಕಿನ ಮೇಲೆ ಕಸ್ತೂರಿ ರಂಗನ್ ವರದಿ, ತೂಗುಕತ್ತಿ ಬೀಸುತ್ತಿದೆ.

ಈಗಾಗಲೇ 5 ಬಾರಿ ಕರಡು ಅಧಿಸೂಚನೆ ಪ್ರಕಟಗೊಂಡಿದ್ದರೂ, ಮತ್ತೆ ಆರನೇ ಬಾರಿ ಕರಡು ಅಧಿಸೂಚನೆ ಪ್ರಕಟವಾಗಲಿದ್ದು, ಆಕ್ಷೇಪಣೆಗೆ ಸಂಬಂಧಿಸಿದಂತೆ 60 ದಿನಗಳ ಗಡುವು ನೀಡಲಾಗಿತ್ತು. ಇದೀಗ ಗಡುವಿನ ಅವಧಿ ಮುಗಿಯುತ್ತಾ ಬಂದಿದ್ದು, ತಾಲೂಕಿನ 9 ಗ್ರಾಮ ಪಂಚಾಯಿತಿಗಳಲ್ಲಿಯೂ ವಿಶೇಷ ಗ್ರಾಮಸಭೆ ನಡೆಸಿ ಗ್ರಾಮಸ್ಥರು ಭಾರೀ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸಿದ್ದಾರೆ.

ಈ ಹಿಂದೆಯೂ ಗ್ರಾಮಪಂಚಾಯಿತಿ ಮಟ್ಟದಲ್ಲಿ ವಿಶೇಷ ಗ್ರಾಮಸಭೆ ನಡೆಸಿ ಆಕ್ಷೇಪಣೆ ಸಲ್ಲಿಸಲಾಗಿತ್ತು. ಶೃಂಗೇರಿ ತಾಲೂಕಿನ ಬಹುತೇಕ ಗ್ರಾಮಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುತ್ತದೆ. ತಾಲೂಕಿನ ಅಸನಬಾಳು, ನೀಲಂದೂರು, ಕೆ. ಮಸಿಗೆ, ಮರ್ಕಲ್, ಮೀಗಾ, ಮಸಿಗೆ, ಕುಂಬರಗೋಡು, ಯಡದಾಳು, ಯಡದಳ್ಳಿ, ಕೂತಗೋಡು, ನೆಮ್ಮಾರು, ಸುಂಕದಮಕ್ಕಿ, ಕೆರೆ ಗ್ರಾಮ, ಮಲ್ನಾಡ್, ನೆಮ್ಮಾರು ಎಸ್ಟೇಟ್, ಮಾತೋಳ್ಳಿ, ಗುಲಗಂಜಿ ಮನೆ, ಶೀರ್ಲು, ಹಾದಿ, ಮುಡುಬ, ಬಾಳೆಗೆರೆ ಗ್ರಾಮಗಳು ಕಸ್ತೂರಿ ರಂಗನ್ ವ್ಯಾಪ್ತಿಗೆ ಒಳಪಡುತ್ತದೆ.

ಕಳೆದ ದಶಕಗಳಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಇದ್ದು, ದೊಡ್ಡಮಟ್ಟದ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಬಂದಿದ್ದವು. ಒಂದೆಡೆ ನಿರಂತ ಹೋರಾಟಗಳ ಸದ್ದುಗಳು ಮಾರ್ಧನಿಸುುತ್ತಿದ್ದರೆ ಇನ್ನೊಂದೆಡೆ ಸದ್ದಿಲ್ಲದೇ ವರದಿ ಜಾರಿಯ ತಯಾರಿಗಳು ನಡೆಯುತ್ತಲೇ ಬಂದಿದೆ. ಚುನಾವಣೆ ಸಂದರ್ಭಗಳಲ್ಲಿ ಪ್ರಮುಖ ವಿಷಯ ಕೂಡ ಆಗಿ ಪ್ರಚಲಿತಗೊಂಡಿತ್ತು. ಆದರೆ ಜನರಿಗೆ ಮಾತ್ರ ಭರವಸೆಗಳೇ ಸಿಗುತ್ತಾ ಹೋಯಿತು.

ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಕೃಷಿ ಆಧಾರಿತ ಬದುಕು ಕಟ್ಟಿಕೊಂಡಿರುವ ಜನರಲ್ಲಿ ಗೊಂದಲಗಳು, ಆತಂಕಗಳು ಮೂಡುತ್ತಿವೆ. ತಲೆ ತಲಾಂತರದಿಂದ ಕೃಷಿಯನ್ನೇ ನಂಬಿ ಸಾಗಿಸುತ್ತಿರುವ ಬದುಕು ಇವರದ್ದಾಗಿದೆ. ಈ ವರದಿ ಜಾರಿಯಾದರೆ ಜನವಸತಿ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದು ಇಲ್ಲಿನ ಜನರ ಆತಂಕ.

ಈಗಾಗಲೇ ಸರ್ಕಾರದ ಅರಣ್ಯ ಕಾಯ್ದೆಗಳು, ಅರಣ್ಯ ಇಲಾಖೆ ನೀತಿ ನಿಯಮಗಳಿಂದ ನಿರಂತರ ಶೋಷಣೆ ಗೊಳಗಾಗುತ್ತಿರುವ ಈ ಭಾಗದ ನಿವಾಸಿಗಳಿಗೆ ಇನ್ನೂ ಕಸ್ತೂರಿ ರಂಗನ್ ವರದಿ ಜಾರಿಯಾದರೆ ವಿದ್ಯುತ್, ರಸ್ತೆ, ಸೇತುವೆ, ಕುಡಿಯುವ ನೀರು, ಜನವಸತಿ ಪ್ರದೇಶ, ಮನೆಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳಿಗೆ ಕುತ್ತು ಬಂದು ಭವಿಷ್ಯದ ಬದುಕಿನ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಮಡುಗಟ್ಟಿದೆ.

ಏನೇ ಆದರೂ ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆಯಾಗಲೀ, ಒತ್ತುವರಿ ತೆರವು ಬಗ್ಗೆ ಯಾಗಲೀ ಜನರು ಮಾತ್ರ ನಿರಂತರ ಹೋರಾಟ, ಪ್ರತಿಭಟನೆ ದಾರಿಯಲ್ಲಿದ್ದಾರೆ. ಪರಿಸರವೂ ಬೇಕು, ಅರಣ್ಯಗಳು ಬೇಕು, ಪ್ರಾಣಿ ಪಕ್ಷಿಗಳು ಜೀವಿಸಬೇಕು. ಜತೆಗೆ ಮಾನವನು ಬದುಕು ಕಟ್ಟಿಕೊಳ್ಳಬೇಕು. ತಲೆ ತಲಾಂತರದಿಂದ ಪ್ರಕೃತಿ ನಡುವೆ ಬದುಕಿ ಬಂದಿರುವ ಮಾನವನ ಬದುಕನ್ನು ಪರಿಸರ, ಅರಣ್ಯ ಕಾಯ್ದೆಗಳ ಮೂಲಕ ಕಸಿದುಕೊಳ್ಳಲು ಹೊರಟಿರುವದು ಸರಿಯಲ್ಲ ಎಂಬುದು ಜನರ ವಾದ.

------

ಜನರ ಬದುಕಿಗೆ ಕೊಡಲಿಯೇಟು

ಸಣ್ಣ ರೈತರು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಅವರ ಭೂಮಿ ಕಸಿದುಕೊಂಡು ಅವರ ಬದುಕಿಗೆ ಕೊಡಲಿಯೇಟು ನೀಡಲು ಹೊರಟಿದೆ. ಕಸ್ತೂರಿ ರಂಗನ್ ವರದಿ ಮಾರಕ ಯೋಜನೆ. ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ಕೈಬಿಡಬೇಕು.

-- ರಾಜೇಶ್ ಮೇಘಳಬೈಲು.

ಅಧ್ಯಕ್ಷ, ತಾಲೂಕು ಬಿಜೆಪಿ ರೈತ ಮೋರ್ಚಾ.

-------

ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ:

ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಗೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಗ್ರಾಮಸ್ಥರಿಂದ ಆಕ್ಷೇಪಣೆ ಮಾಡಲಾಗುತ್ತಿದೆ. ಗ್ರಾಮಸ್ಥರ ವಿರೋಧವೂ ಇದೆ. ಜನರಿಗೆ ಮಾರಕವಾಗುವ ಯೋಜನೆಗಳನ್ನು ಜಾರಿ ಮಾಡಬಾರದು. ಕಸ್ತೂರಿ ರಂಗನ್ ವರದಿ, ಒತ್ತುವರಿ ತೆರವು ವಿರುದ್ಧ ಹೋರಾಟ, ಪ್ರತಿಭಟನೆಗಳನ್ನು ನಡೆಸುವುದು ಜನರ ಹಕ್ಕು

--ಎಚ್.ಜಿ.ಪುಟ್ಟಪ್ಪ ಹೆಗ್ಡೆ

--------

21 ಶ್ರೀ ಚಿತ್ರ 1- ಶೃಂಗೇರಿ ತಾಲೂಕಿನ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ನೆಮ್ಮಾರು ಗ್ರಾಮದ ಒಂದು ನೋಟ.

21 ಶ್ರೀ ಚಿತ್ರ -2.ಪಶ್ಟಿಮ ಘಟ್ಟಗಳ ದಟ್ಟ ಅರಣ್ಯ ಪ್ರದೇಶ.