ಸಾರಾಂಶ
ವಿಶ್ವ ಕರ್ಮ ಪೂಜೋತ್ಸವ, ಧರ್ಮ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕಾರಟಗಿ
ವಿಶ್ವಕರ್ಮ ಸಮಾಜವು ಸಾವಿರಾರು ವರ್ಷಗಳ ಪ್ರಾಚೀನ ಸಂಸ್ಕೃತಿ ಹೊಂದುವ ಮೂಲಕ ವಿಜ್ಞಾನ ಹಾಗೂ ತಂತ್ರಜ್ಞಾನದ ಕುರುಹು ಆಗಿದೆ. ಸೃಷ್ಟಿ, ಸ್ಥಿತಿ, ಲಯಗಳಿಗೆ ವಿಶ್ವಕರ್ಮನೇ ಮೂಲ ಪುರುಷ. ಆದ್ದರಿಂದ ವಿಶ್ವದ ಸೃಷ್ಟಿಕರ್ತರು ವಿಶ್ವಕರ್ಮರು ಎಂದು ವಿಶ್ವಕರ್ಮ ಸಮಾಜ ಜಿಲ್ಲಾಧ್ಯಕ್ಷ ನಾಗೇಶಕುಮಾರ್ ಕೆ. ಹೇಳಿದರು.ಇಲ್ಲಿನ ಮೌನೇಶ್ವರ ದೇವಸ್ಥಾನದಲ್ಲಿ ಶ್ರೀವಿಶ್ವಕರ್ಮ ಸಮಾಜ ಹಮ್ಮಿಕೊಂಡಿದ್ದ ವಿಶ್ವ ಕರ್ಮ ಪೂಜೋತ್ಸವ ಅಂಗವಾಗಿ ನಡೆದ ಧರ್ಮ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದ ಹತ್ತು ಹಲವು ಶ್ರೇಷ್ಠ ಆರಾಧನಾ ಮಂದಿರಗಳು, ದೇವಸ್ಥಾನಗಳಲ್ಲಿ, ಶಿಲ್ಪಕಲಾ ಸಮುಚ್ಛಯಗಳಲ್ಲಿ ಶಿಲ್ಪಕಲೆ, ಕಲಾಕೃತಿಗಳನ್ನು ಹಾಗೂ ರೈತರಿಗೆ ಬೇಕಾದ ಕೃಷಿ ಉಪಕರಣಗಳ, ದೇವಸ್ಥಾನಗಳಲ್ಲಿನ ರಥ, ಉಚ್ಛಯ, ಆಭರಣ ವಿಶ್ವಕರ್ಮರ ಕೈಯಲ್ಲಿ ಅರಳಿವೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ವಿಶ್ವಕರ್ಮರು ಸಕಲ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.ಕೂಡಲಸಂಗಮ ಪಂಚಮಸಾಲಿ ಪೀಠದ ದಾಸೋಹ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಸುಂಕದ, ಈಶಪ್ಪ ಬಡಿಗೇರ್ ಮತ್ತು ನಿವೃತ್ತ ಉಪನ್ಯಾಸಕ ಮಹಾಬಳೇಶ್ವರ ವಿಶ್ವಕರ್ಮ ಮಾತನಾಡಿದರು.
ನಾಗಲಿಂಗಾಚಾರ್ಯ ವೀರಣ್ಣಾಚಾರ್ಯ ವೇದ ಪಾಠಕ ಸಾನಿಧ್ಯ ವಹಿಸಿದ್ದರು. ಸೂಗೂರೇಶ್ವರ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು.ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ, ನಿವೃತ್ತ ಶಿಕ್ಷಕರಾದ ಅಮರೇಶಪ್ಪ ಮಾಕಾಪುರ, ಹನುಮಂತಪ್ಪ ಚನ್ನಳ್ಳಿ, ಈಶಪ್ಪ ವಿಶ್ವಕರ್ಮ, ನಿವೃತ್ತ ಎಎಸ್‌ಐ ಮೌನೇಶ ಅವರನ್ನು ಸನ್ಮಾನಿಸಲಾಯಿತು.
ಮೆರವಣಿಗೆ:ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವದ ಅಂಗವಾಗಿ ವಿಶ್ವಕರ್ಮರ ಹಾಗೂ ಶ್ರೀ ಮೌನೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆಗೆ ಪುರಸಭೆ ಬಳಿಯ ೩೧ನೇ ಕಾಲುವೆಯ ಬಳಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಮೆರವಣಿಗೆಯುದ್ಧಕ್ಕೂ ವಿವಿಧ ವಾದ್ಯಮೇಳ, ಕಳಸ-ಕನ್ನಡಿ ಹೊತ್ತ ಮಹಿಳೆಯರು ಸಾಗಿದರು. ಈ ವೇಳೆ ರಾಜಕೀಯ ಮುಖಂಡರು, ವಿವಿಧ ಸಮಾಜ ಬಾಂಧವರು ವಿಶ್ವಕರ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮಿಸಿದರು.
ಈ ಸಂದರ್ಭ ಪ್ರಮುಖರಾದ ಸಮಾಜದ ವೀರೇಶ ಪತ್ತಾರ, ಕಾಳಪ್ಪ ಬಡಿಗೇರ, ವೀರಭದ್ರಪ್ಪ ಬಡಿಗೇರ, ಹನುಮಂತ ವಡ್ರಕಲ್, ಹನುಮೇಶ ವಿಶ್ವಕರ್ಮ, ಮಲ್ಲಿಕಾರ್ಜುನ, ಎಂ.ವೈ. ಬಡಿಗೇರ್, ವಿನೋದ ಬಡಿಗೇರ, ಶ್ರೀಧರ, ಮೌನೇಶ, ಕಮಲ್, ಮೋಹನಕುಮಾರ್, ಗಂಗಾಧರ, ಬ್ರಹ್ಮಯ್ಯ, ಶರಣಯ್ಯಸ್ವಾಮಿ ಯರಡೋಣಾ, ಚಂದ್ರಶೇಖರ ಆನೆಹೊಸೂರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸಮಾಜದವರು ಮೆರವಣಿಗೆಯಲ್ಲಿದ್ದರು.