ಕನಿಷ್ಠ ಬೆಂಬಲ ಬೆಲೆ ಜಾರಿ, ರೈತ ವಿರೋಧಿ ಮಸೂದೆ ವಾಪಸಿಗೆ ಆಗ್ರಹ

| Published : Aug 10 2024, 01:33 AM IST

ಸಾರಾಂಶ

ರಾಯಚೂರಿನ ಡಿಸಿ ಕಚೇರಿ ಮುಂದೆ ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಪೋರೇಟ್ ಕಂಪನಿಗಳ ವಿರುದ್ಧ ಭೂತ ದಹನ ಮಾಡಿ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿಗೊಳಿಸಬೇಕು ಹಾಗೂ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಪೋರೇಟ್ ಕಂಪನಿಗಳ ವಿರುದ್ಧ ಭೂತ ದಹನ ಮಾಡಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಘಟಕದ ಪದಾಧಿಕಾರಿಗಳು, ಮುಖಂಡರು ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳ ವಿರುದ್ಧ ಘೊಷಣೆ ಕೂಗಿದರು. ಆ.9 ಕ್ವಿಟ್ ಇಂಡಿಯಾ ಚಳುವಳಿಯ ದಿನ ಹಿನ್ನೆಲೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಕ್ಷೇತ್ರದಲ್ಲಿ ಕಾರ್ಪೋರೇಟಿಕರಣ ನಿಲ್ಲಿಸಿಬೇಕು, ರೈತ ವೀರೋಧಿ ವಿದ್ಯುತ್ ಖಾಸಗಿಕರಣ ಮಸೂದೆ ಹಿಂಪಡೆಬೇಕು, ಭಾರತದ ಕೃಷಿ ಉತ್ಪಾದನೆ-ಮಾರುಕಟ್ಟೆ-ಸಂಗ್ರಹಣೆ ಮತ್ತು ವಿತರಣೆ ರೈತರು ಮತ್ತು ಸರ್ಕಾರದ ಅಧೀನದಲ್ಲಿಯೇ ಇರುವಂತೆ ರಕ್ಷಣೆ ಮಾಡಬೇಕು. ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು ಹಾಗೂ ಕೈಗಾರಿಕೆ-ರಾಷ್ಟ್ರೀಯ ಹೆದ್ದಾರಿ- ರಾಜ್ಯ ಹೆದ್ದಾರಿ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿ ಕಬಳಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ದೂರವಿಡಬೇಕು. ಕೃಷಿ ಉತ್ಪನ್ನಗಳಿಗೆ ಡಾ.ಸ್ವಾಮಿನಾಥನ್ ನೇತೃತ್ವದ ಸಮಿತಿ ಶಿಪಾರಸ್ಸಿನಂತೆ ಉತ್ಪಾದನಾ ವೆಚ್ಚ ಶೇ.50ರಷ್ಟು ಬೆಂಬಲ ಬೆಲೆ ಕಾನೂನಾತ್ಮಕಗೊಳಿಸಬೇಕು, ಕೃಷಿ ಒಳಸುರಿಗಳ ಮೇಲಿನ ಜಿಎಸ್‌ಟಿ ಹಿಂಪಡೆಯಬೇಕು, ಕೃಷಿಗೆ ಅಂತರಿಕ ಸಹಾಯಧನ ಹೆಚ್ಚು ನೀಡಲೂ ಸೂಕ್ತ ಕ್ರಮ ಕೈಗೊಳ್ಳಬೇಕು, ಅಂತರರಾಜ್ಯ ನೀರಾವರಿ ಸಮಸ್ಯೆಗಳನ್ನು ಕಾಲಮಿತಿಯೊಳಗಡೆ ಬಗೆಹರಿಸಬೇಕು ಎಂಬುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಘಟಕದ ಮುಂಖಡರಾದ ಚಾಮರಸ ಮಾಲಿಪಾಟೀಲ್, ಕೆ.ಜಿ.ವಿರೇಶ, ಬಸಲಿಂಗಪ್ಪ ಹೀರೆನೆಗನೂರು, ಖಾಜಾ ಅಸ್ಲಂ ಪಾಷಾ. ಮಾರೆಪ್ಪ ಹರವಿ, ಡಿ.ಎಸ್.ಶರಣಬಸವ, ಪ್ರಭಾಕರ ಪಾಟೀಲ್, ಬೂದೆಯ್ಯ ಸ್ವಾಮಿ,ಎಸ್.ಮಾರೆಪ್ಪ ವಕೀಲ್, ಶ್ರೀನಿವಾಸ್ ಕಲವಲದೂಡ್ಡಿ, ವಿ.ಮುದ್ದಕಪ್ಪ ನಾಯಕ, ಆನಂದ, ಗೋವಿಂದ, ಆಂಜನೇಯ ಕುರುಬದೂಡ್ಡಿ ಸೇರಿ ಅನೇಕರು ಇದ್ದರು.