ಗ್ಯಾರಂಟಿ ಉತ್ಸವದಲ್ಲಿ ಸಾಕಷ್ಟು ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದು, ಇದರಿಂದ ಯೋಜನೆಗಳು ಮನೆ ಮನೆಗೆ ತಲುಪುತ್ತಿವೆ ಎಂಬುದು ಸ್ಪಷ್ಟವಾಗಿದೆ. ಈ ಯೋಜನೆ ಅಡಿ 1 ಲಕ್ಷ ಕೋಟಿ ಜನರಿಗೆ ನೇರವಾಗಿ ಹಣ ಸಂದಾಯವಾಗಿದ್ದು ಈ ವರೆಗೆ 638 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್‌ಗಳಲ್ಲಿ ಸಂಚರಿಸಿದ್ದಾರೆ.

ಧಾರವಾಡ:

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯ ಶೇ.98ರಷ್ಟು ಫಲಾನುಭವಿಗಳಿಗೆ ಹಣ ನೇರವಾಗಿ ತಲುಪಿದ್ದು, ಧಾರವಾಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.

ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಉತ್ಸವಕ್ಕೆ ಚಾಲನೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದ 165 ಭರವಸೆಗಳನ್ನು ಕಡಿಮೆ ಅವಧಿಯಲ್ಲಿ ಈಡೇರಿಸಿದ ಕೀರ್ತಿ ಸಲ್ಲುತ್ತದೆ ಎಂದರು.

ಗ್ಯಾರಂಟಿ ಉತ್ಸವದಲ್ಲಿ ಸಾಕಷ್ಟು ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದು, ಇದರಿಂದ ಯೋಜನೆಗಳು ಮನೆ ಮನೆಗೆ ತಲುಪುತ್ತಿವೆ ಎಂಬುದು ಸ್ಪಷ್ಟವಾಗಿದೆ. ಈ ಯೋಜನೆ ಅಡಿ 1 ಲಕ್ಷ ಕೋಟಿ ಜನರಿಗೆ ನೇರವಾಗಿ ಹಣ ಸಂದಾಯವಾಗಿದ್ದು ಈ ವರೆಗೆ 638 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್‌ಗಳಲ್ಲಿ ಸಂಚರಿಸಿದ್ದಾರೆ ಎಂದು ಹೇಳಿದರು.

ಸಚಿವ ಸಂತೋಷ ಲಾಡ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ನಿಮ್ಮ ಹಣವನ್ನು ನಿಮಗೆ ನೀಡುತ್ತಿದ್ದೇವೆ. ಆದರೆ, ಬಿಜೆಪಿಯವರು ಅನವಶ್ಯಕವಾಗಿ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನರೇಗಾ ಯೋಜನೆ ವಿಫಲವಾಗಿದೆ. ದೇಶದಲ್ಲಿ ಆರಂಭಿಸಿದ್ದ 2.11 ಲಕ್ಷ ಸ್ಟಾರ್ಟ್‌ಅಪ್‌ ಬಂದ್‌ ಆಗಿವೆ. 1.15 ಲಕ್ಷ ಸಣ್ಣ ಕೈಗಾರಿಕೆಗಳು ನಷ್ಟವಾಗಿ ಲಕ್ಷಾನುಗಟ್ಟಲೇ ಉದ್ಯೋಗಳು ಕಡಿತಗೊಂಡಿವೆ. ನಿತ್ಯದ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

2028ರಲ್ಲಿ ಮತ್ತೆ ಕೈ ಸರ್ಕಾರ?:

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದ್ದು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಹೊರೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಸರ್ಕಾರದ ಮೇಲೆ ಜನರ ವಿಶ್ವಾಸವಿಟ್ಟಿದ್ದು 2028ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾಧಿಕಾರದ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಕುರಿತು ಡಾ. ವಾಸು ಎಚ್. ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ತೀವ್ರ ವಿರೋಧ ಹಾಗೂ ಕಟುವಾಗಿ ಮಾತನಾಡಲಾಯಿತು. ಆದರೆ, ಇಂದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ, ವ್ಯಾಪಾರ ವಹಿವಾಟು ದ್ವಿಗುಣವಾಗಿದೆ, ಉದ್ಯೋಗಾವಕಾಶ ಹೆಚ್ಚಳವಾಗಿವೆ. ಇಡೀ ದೇಶದಲ್ಲಿ ತಲಾದಾಯದಲ್ಲಿ ರಾಜ್ಯ ಪ್ರಥಮದಲ್ಲಿದೆ. ಜಿಎಸ್‌ಟಿ ಬೆಳೆವಣಿಗೆ ದರದಲ್ಲಿ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ಕೂಡ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ, ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ, ಜಿಪಂ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮಹಾನಗರ ಪಾಲಿಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ತಾಲೂಕು ಅಧ್ಯಕ್ಷ ಅರವಿಂದ ಏಗನಗೌಡರ ಇದ್ದರು. ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು. ಸಿಟಿ ಹೊಡೆದ ಲಾಡ್‌

ಬರೀ 500 ಆಸನವುಳ್ಳ ಸೃಜನಾ ರಂಗಮಂದಿರಲ್ಲಿ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಉತ್ಸವದಲ್ಲಿ ತೀವ್ರ ಗದ್ದಲ-ಗೊಂದಲ ಸೃಷ್ಟಿಯಾಯಿತು. ಸುಮಾರು 2000ಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳನ್ನು ಕರೆ ತರಲಾಗಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಸ್ಥಳಾವಕಾಶದ ಕೊರತೆಯಿಂದ ಅವರು ತೀವ್ರ ಸಮಸ್ಯೆ ಅನುಭವಿಸಬೇಕಾಯಿತು. ವೇದಿಕೆ ಹೊರಗೆ ಸ್ಕ್ರೀನ್‌ ಹಾಕಿದರೂ ಸಹ ಮಹಿಳಾ ಫಲಾನುಭವಿಗಳನ್ನು ನಿಯಂತ್ರಿಸಲು ಪೊಲೀಸರು ತೀವ್ರ ಹರಸಾಹಸ ಪಡಬೇಕಾಯಿತು. ಹೀಗಾಗಿ ಬೇಸತ್ತ ಫಲಾನುಭವಿಗಳು ಕಾರ್ಯಕ್ರಮದ ಅರ್ಧಕ್ಕೆ ಎದ್ದು ಹೋದರು. ಹೀಗೇ ಎದ್ದು ಹೋಗುತ್ತಿದ್ದವರನ್ನು ಸಚಿವ ಸಂತೋಷ ಲಾಡ್‌ ಸಿಟಿ ಹೊಡೆದು ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಪಕ್ಷದ ಕಾರ್ಯಕ್ರಮವಾ?

ಪಂಚ ಗ್ಯಾರಂಟಿ ಉತ್ಸವ ಸರ್ಕಾರದ ಕಾರ್ಯಕ್ರಮವೋ ಅಥವಾ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವೋ ತಿಳಿಯದಂತಾಗಿತ್ತು. ವೇದಿಕೆಯಲ್ಲಿ ಸಚಿವರು, ಶಾಸಕರು, ಯೋಜನೆ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ವೇದಿಕೆ ಕಾರ್ಯಕ್ರಮ ನಿಭಾಯಿಸಿದರು. ಜತೆಗೆ ಈ ಕಾರ್ಯಕ್ರಮಕ್ಕೆ ಪ್ರತ್ಯೇಕ ಅನುದಾನ ಇಲ್ಲದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೇಬಿಗೆ ಕತ್ತರಿ ಬಿದ್ದಿದ್ದಂತೂ ಸುಳ್ಳಲ್ಲ.