ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಸರ್ಕಾರಿ ನೌಕರರ ಒಗ್ಗಟ್ಟು ಮತ್ತು ಸಂಘಟನಾತ್ಮಕ ಪ್ರಯತ್ನದ ಫಲವಾಗಿ ಏಳನೇ ವೇತನ ಆಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.ಶನಿವಾರ ಪದ್ಮಾ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಸುಮ್ಮನೇ ಸಿಕ್ಕಿಲ್ಲ. ಅದಕ್ಕಾಗಿ ಸರ್ಕಾರಿ ನೌಕರರ ಸಂಘದ ಪ್ರಯತ್ನ ಅಷ್ಟಿಷ್ಟಿಲ್ಲ. ಸರ್ಕಾರ ಕೊಡಲು ಹಿಂದೇಟು ಹಾಕಿದ ವೇಳೆಯಲ್ಲಿ ರಾಜ್ಯಾದ್ಯಂತ ನೌಕರ ಬಂಧುಗಳು ಹೋರಾಟ ಪ್ರಾರಂಭಿಸಿದರು. ಶಾಸಕರು, ಸಚಿವರಿಗೆ ಮನವಿ ನೀಡುವ ಮೂಲಕ ಒತ್ತಡ ಹಾಕಿದರು. ಇದಾದ ಮೇಲೆ ನಾವು ಹೋರಾಟದ ದಿನಾಂಕ ನಿಗದಿ ಮಾಡಿದ್ದರಿಂದ ಸರ್ಕಾರ ಅನಿವಾರ್ಯವಾಗಿ ಘೋಷಣೆ ಮಾಡಿ ಜಾರಿ ಮಾಡಿತು ಎಂದು ಹೇಳಿದರು.
ಸಿ.ಎಂ. ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗವನ್ನು ಯಥಾವತ್ತಾಗಿ ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದ್ದಾರೆ. ನೌಕರರ ಹಿತವನ್ನು ಗ್ಯಾರಂಟಿಗಳಿಂದಾಗಿರುವ ಆರ್ಥಿಕ ಹೊರೆಯಂತಹ ಸಂಕಷ್ಟದ ಮಧ್ಯೆಯೂ ಜಾರಿ ಮಾಡಿದ್ದಾರೆ ಹೀಗಾಗಿ ಅವರ ಉಪಕಾರ ಸ್ಮರಣೆ ಮಾಡಲು ಬೆಂಗಳೂರಿನಲ್ಲಿ ಆ.17ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.ಅತಿಥಿಗಳಾಗಿ ಆಗಮಿಸಿದ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಮಾತನಾಡಿ, ಸರ್ಕಾರಿ ನೌಕರರು ಶೃದ್ಧೆಯಿಂದ ಕೆಲಸ ಮಾಡಿದರೇ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿ,ರಾಜ್ಯ ಸರ್ಕಾರಿ ನೌಕರರು ಮಕ್ಕಳಿಗೆ ಆಸ್ತಿಯನ್ನು ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು,ಮಕ್ಕಳು ಸಹ ತಂದೆ,ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದರು.ಡಿ.ವೈ.ಎಸ್.ಪಿ ಗೋಪಾಲಕೃಷ್ಣ ಗೌಡರ ಮಾತನಾಡಿದರು.
ಕಾರ್ಯಾಧ್ಯಕ್ಷ ಎಸ್.ಬಸವರಾಜು, ಹಿರಿಯ ಉಪಾಧ್ಯಕ್ಷ ಎಂ.ವ್ಹಿ.ರುದ್ರಪ್ಪ, ಪ್ರಧಾನ ಕಾರ್ಯದರ್ಶಿಶ್ರೀನಿವಾಸ ಡಿ. ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷರು ಸಂಜು ಸತರೆಡ್ಡಿ, ಎಂ.ಬಿ.ನಾಯಕ್, ರಾಜ್ಯ ಪರಿಷತ್ ಸದಸ್ಯ ನವೀನ ಎಸ್ ಗಂಗರೆಡ್ಡಿ, ಸಂಘದ ಪ್ರಧಾನ ಕಾರ್ಯದರ್ಶಿ ಮಹಾದೇವ ಗೋಕಾರ, ಖಜಾಂಚಿ ದತ್ತಾ ಕಾಂಬಳೆ, ಎಸ್.ಎನ್.ಬೆಳಗಾವಿ, ಡಿ.ಎಸ್.ವಂಟಗುಡೆ, ಉಮೇಶ ತೋಟದ, ಡಾ, ಅರುಣ ಸಂಗ್ರೊಳ್ಳೆ, ರಾಮಗೌಡ ಪಾಟೀಲ, ಮಹಾಂತೇಶ ಬಿರಾದಾರ, ಗೌಡಪ್ಪ ದಡ್ಡಿ, ವಿಶ್ವನಾಥ ಹಾರೂಗೇರಿ,ಆನಂದ ಹಂಜ್ಯಾಗೋಳ, ಬಸವರಾಜ ಮುರಗೋಡ,ಅವಿನಾಶ ಹೊಳೆಪ್ಪಗೋಳ, ಚಂದ್ರಶೇಖರ ಅರಭಾಂವಿ,ವಿಜಯಾರಾಣಿ ಬಸಣ್ಣವರ, ರೂಪಾ ಬಣಕಾರ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ನೌಕರರ ಸಂಘದ ಅಧ್ಯಕ್ಷ ಬಿ.ಎ.ಕುಂಬಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಬಿ.ಸೊಲ್ಲಾಪೂರೆ ನಿರೂಪಿಸಿದರು.ಎನ್‌ಪಿಎಸ್, ಒಪಿಎಸ್ ಮಾಡುವುದು ನಮ್ಮ ಗುರಿಯಾಗಿದೆ. ಅದನ್ನ ಜಾರಿ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದು, ವರದಿಯನ್ನೇ ತರಿಸಿಕೊಂಡು, ಕ್ರಮ ವಹಿಸುತ್ತಾರೆ. ಕೇಂದ್ರ ಮಾದರಿ ವೇತನಕ್ಕಾಗಿ ನಮ್ಮ ಬೇಡಿಕೆ ಇದ್ದು, ಮುಂದಿನ ಅವಧಿಯಲ್ಲಿ ಅದಕ್ಕಾಗಿ ಖಂಡಿತ ಪ್ರಯತ್ನ ಮಾಡುತ್ತೇನೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದರು.
-ಸಿ.ಎಸ್. ಷಡಕ್ಷರಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ