ಭಾರತ ಸ್ವಾವಲಂಬಿಯಾಗಿಸಲು ಕೇಂದ್ರದಿಂದ ಜನಪರ ಯೋಜನೆ ಜಾರಿ: ಶಾಸಕ ಕೃಷ್ಣನಾಯ್ಕ

| Published : Sep 25 2024, 12:59 AM IST

ಭಾರತ ಸ್ವಾವಲಂಬಿಯಾಗಿಸಲು ಕೇಂದ್ರದಿಂದ ಜನಪರ ಯೋಜನೆ ಜಾರಿ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದ ಜನ ಯೋಜನೆಗಳ ಮಾಹಿತಿ ಪಡೆಯುವ ಜತೆಗೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಕೃಷ್ಣನಾಯ್ಕ ಮನವಿ ಮಾಡಿದರು.

ಹೂವಿನಹಡಗಲಿ: ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಕೇಂದ್ರ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ನೀಡುವ ಜತೆಗೆ ಎಲ್ಲರ ಮನೆ ಬಾಗಿಲಿಗೂ ತಲುಪಬೇಕಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಪಂಚಮಸಾಲಿ ಸಮುದಾಯ ಭವನದಲ್ಲಿ ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗ-ಬಳ್ಳಾರಿ, ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ, ಪೋಷಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಮಟ್ಟದಲ್ಲಿ ನಡೆಯಬೇಕಿದ್ದ ಕೇಂದ್ರ ಸರ್ಕಾರದ ಯೋಜನೆಗಳ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ಈ ಭಾಗದ ಜನ ಯೋಜನೆಗಳ ಮಾಹಿತಿ ಪಡೆಯುವ ಜತೆಗೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ವಿಶ್ವದ ಇತರೆ ರಾಷ್ಟಗಳನ್ನು ಅವಲಂಬಿಸದೇ, ಸ್ವಾವಲಂಬಿಯಾಗಲು ದೇಶದಲ್ಲಿ ಮೇಕ್‌ ಇನ್‌ ಇಂಡಿಯಾ ಆರಂಭಿಸಿದೆ. ಆಯುಷ್ಮಾನ್‌ ಭಾರತ್‌ ಯೋಜನೆ, ಪಿಎಂ ಸೂರ್ಯ ಘರ್‌ ಯೋಜನೆ, ಪಿಎಂ ಆವಾಸ್‌ ಹೀಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡಲಾಗಿದೆ ಎಂದರು.

ಬ್ರಿಟಿಷ್ ಕಾಲದ ಕಾನೂನುಗಳಿಗೆ ತಿದ್ದುಪಡಿ ತಂದು ಈ ದೇಶದ ಕಾನೂನುಗಳು ಎಲ್ಲರಿಗೂ ಮಾಹಿತಿ ಇರಬೇಕೆಂದು ಕಾರಣಕ್ಕಾಗಿ, ಅವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವ್ಯಕ್ತಿ ಠಾಣೆಗೆ ಹೋಗದೇ ಮನೆಯಲ್ಲೇ ಇದ್ದು ಇ-ಎಫ್‌ಐಆರ್‌ ಮೂಲಕ ದೂರು ದಾಖಲಿಸಲು ಕೇಂದ್ರ ಅವಕಾಶ ಕಲ್ಪಿಸಿದೆ ಎಂದರು.

ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಎಸ್‌.ಜಿ. ರವೀಂದ್ರ ಮಾತನಾಡಿ, ಪೋಷಣ ಅಭಿಯಾನ ಕಾರ್ಯಕ್ರಮದಿಂದ ಮಹಿಳೆಯರಿಗೆ, ಪೌಷ್ಟಿಕಾಂಶ ಹಾಗೂ ಯೋಜನೆಯ ಮಹತ್ವವನ್ನು ತಿಳಿಸಲಾಗುತ್ತಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಪೋಷಣ ಅಭಿಯಾನಕ್ಕೆ ಕರೆ ತಂದು ಅವರಿಗೆ ಛಾಯಾ ಚಿತ್ರಗಳನ್ನು ತಿಳಿಸುವ ಜತೆಗೆ ಎಲ್ಲ ರೀತಿಯ ಅರಿವು ಮೂಡಿಸಬೇಕೆಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಸ್‌. ಶ್ವೇತಾ ಮಾತನಾಡಿ, ಪ್ರತಿಯೊಂದು ಹಳ್ಳಿಗಳು ಹಾಗೂ ತಾಂಡಾಗಳಲ್ಲಿ ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಬೇಕು ಎಂಬ ಉದ್ದೇಶವಿದೆ. ಸರ್ಕಾರದ ಈ ಪೋಷಣ ಅಭಿಯಾನ ಎಲ್ಲ ಕಡೆಗೂ ಜನಾಂದೋಲನ ರೀತಿಯಲ್ಲಿ ಆರಬೇಕಿದೆ ಎಂದರು.

ಡಿಎಚ್‌ಒ ಡಾ. ಶಂಕರನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಅನ್ನದಾನ ಸ್ವಾಮಿ, ಸಿಡಿಪಿಒ ರಾಮನಗೌಡ, ಪರಿಸರ ಅಭಿಯಂತರ ಜಗದೀಶ ಹಿರೇಮಠ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ, ವೈದ್ಯ ಡಾ. ಎಸ್‌. ಶಿವಕುಮಾರ, ಪುರಸಭೆ ಸದಸ್ಯ ವಾರದ ಗೌಸ್‌ ಮೋಹಿದ್ದೀನ್‌, ಎಚ್‌.ಪೂಜೆಪ್ಪ, ಎಂ. ಪರಮೇಶ್ವರಪ್ಪ, ಬಿಜೆಪಿ ಮಂಡಲದ ಅಧ್ಯಕ್ಷ ಹಣ್ಣಿ ಶಶಿಧರ, ಹಂಪಸಾಗರ ಕೋಟೆಪ್ಪ, ತೋಟಾನಾಯ್ಕ, ಶಿವಪುರ ಸುರೇಶ, ಬೀರಬ್ಬಿ ಬಸವರಾಜ, ವಿಶ್ವನಾಥ ತಿಪ್ಪಾಪುರ ಸೇರಿದಂತೆ ಇತರರಿದ್ದರು. ಇದೇ ಸಂದರ್ಭದಲ್ಲಿ ಪೌಷ್ಟಿಕ ಆಹಾರಗಳ ಕುರಿತು ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಜತೆಗೆ ಛಾಯಚಿತ್ರಗಳ ಪ್ರದರ್ಶನ ಮತ್ತು ರಂಗೋಲಿ ಪ್ರದರ್ಶನ ಆಯೋಜಿಸಲಾಗಿತ್ತು.