ಸಾರಾಂಶ
ವಿಜಯಪುರ: ಹತ್ತು ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೆ ಬಂದಿದ್ದ ಎತ್ತಿನ ಹೊಳೆ ಯೋಜನೆಗೆ ಅನುಮತಿ ದೊರೆಯದೆ ನನೆಗುದಿಗೆ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎರಡು ವರ್ಷದಲ್ಲಿ 100ಕ್ಕೆ 100ರಷ್ಟು ಗ್ಯಾರಂಟಿ ಎತ್ತಿನ ಹೊಳೆ ಯೋಜನೆ ಜಾರಿಗೆ ತಂದು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎಂದು ಎತ್ತಿನ ಹೊಳೆ ನೀರು ಹರಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಅವರ ಮೊದಲನೇ ಯೋಜನೆಯೆ ಸಂವಿಧಾನ ತಿದ್ದುಪಡಿ ಮಾಡಿ ಬಡವರಿಗೆ ಅನ್ಯಾಯ ಮಾಡುವುದು. ಇಂತವರಿಗೆ ಯಾವ ಕಾರಣಕ್ಕೂ ಮತ ನೀಡಬಾರದು. ಕಾಂಗ್ರೆಸ್ ಜನಪರ, ಬಡವರ ಪರ ಸರ್ಕಾ ವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ದೇಶವನ್ನು ಉಳಿಸಬೇಕೆಂದು ಮನವಿ ಮಾಡಿದರು.ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆಯ ಪಾಲಿಗಾಗಿ ನಾವು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಕ್ಕಾಗಿ ಹೋರಾಡಬೇಕಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದಿಂದ ೨೫ ಮಂದಿ ಬಿಜೆಪಿ ಸಂಸದರನ್ನು ಜನ ಆಯ್ಕೆ ಮಾಡಿದರು. ಆದರೆ, ಅವರೆಲ್ಲರೂ ಪ್ರಧಾನಿ ಮುಂದೆ ತುಟಿಬಿಚ್ಚಲಿಲ್ಲ. ರಾಜ್ಯಕ್ಕೆ ಬರಬೇಕಾಗಿರುವ ಅನುದಾನಗಳನ್ನು ತರಲಿಲ್ಲ. ಮುಂದಿನ ಚುನಾವಣೆಯಲ್ಲಿ ೨೮ ಸ್ಥಾನಗಳ ಪೈಕಿ ೨೦ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಅವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ನಾವು ಮಾನವಧರ್ಮ, ಪ್ರಜಾಪ್ರಭತ್ವ, ಸಂವಿಧಾನದಡಿ ಸಾಮಾಜಿಕ ನ್ಯಾಯ ಕೊಡಲು ರಾಜಕೀಯ ಮಾಡುತ್ತೇವೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು, ರಕ್ಷರಾಮಯ್ಯ ಆಗಿ ಕೆಲಸ ಮಾಡಬೇಕು ಎಂದರು.
ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟು, ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ಸಿಗುವಂತೆ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಕೆಲಸ ಮಾಡಬೇಕು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ ಮಾತನಾಡಿ, ದೇಶದಲ್ಲಿ ೧೦ ವರ್ಷ ಆಡಳಿತ ನಡೆಸಿದ ಪ್ರಧಾನಿ ಮೋದಿ ಅವರು, ಒಂದು ಬಾರಿಯೂ ಮಾಧ್ಯಮಗಳ ಮುಂದೆ ಧೈರ್ಯವಾಗಿ ಮಾತನಾಡಲಿಲ್ಲ, ಚುನಾವಣಾ ಬಾಂಡ್ ಗಳಲ್ಲಿ ಬಿಜೆಪಿ ೬ ಸಾವಿರ ಕೋಟಿ ದೇಣಿಗೆ ಪಡೆದುಕೊಂಡಿದೆ. ಸೋಲಿನ ಭೀತಿಯಲ್ಲಿ ಬಿಜೆಪಿ, ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ. ಮೋದಿಯವರ ಸುಳ್ಳು ಮಾತುಗಳಿಗೆ ಮರುಳಾಗದೇ ಕಾಂಗ್ರೆಸ್ ಅಭ್ಯರ್ಥಿಗೆ ಪಟ್ಟಣದಲ್ಲಿ ೧೦ ಸಾವಿರ ಮತಗಳ ಮುನ್ನಡೆ ಕೊಡಬೇಕು ಎಂದರು.
ಮುಖಂಡರಾದ ಸಂಪತ್ ಕುಮಾರ್, ಮುನಿಚಿನ್ನಪ್ಪ, ಬಾರ್ ಸಂಪತಣ್ಣ, ಕೆ.ಎಂ.ಮಧುಮಹೇಶ್, ಮರವೇ ಕೆಂಪಣ್ಣ, ಆರ್.ಮುನಿರಾಜು, ಟೌನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್, ಬಲಿಜ ಸಂಘದ ಅಧ್ಯಕ್ಷ ಮುನಿರಾಜು, ಹರೀಶ್, ಮುನಿಕೃಷ್ಣಪ್ಪ, ಎಂ.ವೀರಣ್ಣಗೌಡ, ನಾಗಣ್ಣ ಹಾಜರಿದ್ದರು.(ಫೋಟೋ ಕ್ಯಾಫ್ಷನ್)
ವಿಜಯಪುರದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಮತದಾರರನ್ನುದ್ದೇಶಿಸಿ ಮಾತನಾಡಿದರು.