ಸಾರಾಂಶ
ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ಇನ್ಫೋಸಿಸ್ ಕಾಂಪೌಂಡ್ ಕಡೆಯಿಂದ ಚಿರತೆ ಬರುತ್ತಿರುವ ದೃಶ್ಯ ಸೆರೆ ಸಿಕ್ಕಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆಯೊಂದು ಸಂಚರಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ.ಈ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಲು ಮತ್ತು ಸಿಬ್ಬಂದಿ, ಚಿರತೆ ಕಾರ್ಯಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಮೂಲಕ ಚಿರತೆ ಸೆರೆಗೆ ಮುಂದಾಗಿದ್ದಾರೆ.
ಸೋಮವಾರ ಮಧ್ಯರಾತ್ರಿ ಇನ್ಫೋಸಿಸ್ ಆವರಣದ ಗೇಟ್-3ರ ಬಳಿ ಭಾರಿ ಗಾತ್ರದ ಚಿರತೆಯೊಂದು ಭದ್ರತಾ ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಚಿರತೆಯನ್ನು ಕಂಡು ಭದ್ರತಾ ಸಿಬ್ಬಂದಿ ಆತಂಕಗೊಂಡು, ಇನ್ಫೋಸಿಸ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಮಂಗಳವಾರ ಬೆಳಗ್ಗೆ ಇನ್ಫೋಸಿಸ್ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ಇನ್ಫೋಸಿಸ್ ಕಾಂಪೌಂಡ್ ಕಡೆಯಿಂದ ಚಿರತೆ ಬರುತ್ತಿರುವ ದೃಶ್ಯ ಸೆರೆ ಸಿಕ್ಕಿದೆ. ಕೂಡಲು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಡಿಸಿಎಫ್ ಗಳಾದ ಡಾ.ಐ.ಬಿ. ಪ್ರಭುಗೌಡ, ಡಾ.ಕೆ.ಎನ್. ಬಸವರಾಜ ನೇತೃತ್ವದಲ್ಲಿ ಚಿರತೆ ಕಾರ್ಯಪಡೆ ಹಾಗೂ ಮೈಸೂರು ವಿಭಾಗದ ಅರಣ್ಯ ಸಿಬ್ಬಂದಿ ಒಳಗೊಂಡ 40 ಮಂದಿಯ ತಂಡವು ಸ್ಥಳ ಪರಿಶೀಲಿಸಿದ್ದಾರೆ.
ಭದ್ರತಾ ಸಿಬ್ಬಂದಿ ತಿಳಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಲಿಲ್ಲ. ಅಲ್ಲದೆ, ಥರ್ಮಲ್ ಡ್ರೋನ್ ಬಳಸಿ ಇನ್ಫೋಸಿಸ್ ಆವರಣದಲ್ಲಿ ಪರಿಶೀಲಿಸಲಾಯಿತು. ಚಿರತೆ ಓಡಾಡಿರುವ ಸ್ಥಳದ ಸುತ್ತಮುತ್ತ 12 ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ಚಿರತೆ ಸೆರೆಗಾಗಿ 2 ಬೋನ್ ಇರಿಸಲಾಗಿದೆ.ಕ್ಯಾಂಪಸ್ ನಲ್ಲಿ ಚಿರತೆ ಅಡಗಿದ್ದರೆ, ಅದು ಕಾಂಪೌಂಡ್ ಜಿಗಿದು ಹೋಗಲು ಸಹಕಾರಿಯಾಗುವಂತೆ ಆಯ್ದ ಸ್ಥಳದಲ್ಲಿ 10 ಕಡೆ ಏಣಿಗಳನ್ನು ಇರಿಸಲಾಗಿದೆ. ಸ್ಥಳದಲ್ಲೇ ಪಶುವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ.
ಇನ್ಫೋಸಿಸ್ ಆವರಣದ ಒಂದು ಭಾಗದಲ್ಲಿ ನಾಟಿ ಕೋಳಿಗಳಿದ್ದು, ಆ ಭಾಗದ ಚಿರತೆ ಸಂಚರಿಸುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೋಳಿಗಾಗಿಯೇ ಚಿರತೆ ಇನ್ಫೋಸಿಸ್ ಆವರಣಕ್ಕೆ ಬಂದಿರಬಹುದು ಎನ್ನಲಾಗಿದ್ದು, ಆ ಮಾರ್ಗದಲ್ಲೇ ಬೋನ್ ಇರಿಸಲಾಗಿದೆ.