ವಿವಿಗಳಿಂದಲೇ ಕನ್ನಡದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ: ಡಾ.ನಾ.ದಾಮೋದರ ಶೆಟ್ಟಿ

| Published : Apr 22 2024, 02:19 AM IST

ವಿವಿಗಳಿಂದಲೇ ಕನ್ನಡದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ: ಡಾ.ನಾ.ದಾಮೋದರ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಎಂ.ಜಿ.ಎಂ ಕಾಲೇಜಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಎಲ್ಲರ ಮನಸ್ಸಿನಲ್ಲಿ ಕನ್ನಡ ಉಳಿಯಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನ ವಿವಿಗಳಿಂದಲೇ ಆಗುತ್ತಿದೆ. ಕನ್ನಡದ ಅವಸಾನದ ಕ್ರಿಯೆ ನಡೆಯುತ್ತಿದೆ ಎಂದು ಮುಳಿಯ ಸಮಿತಿ ಅಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಅವರುನಗರದ ಎಂ.ಜಿ.ಎಂ ಕಾಲೇಜಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಕೆ. ಪಿ. ರಾವ್, ಎಲ್ಲಾ ಕಾಲಗಳು ಒಳ್ಳೆಯ ಕಾಲಗಳು, ಕೇರಳಕ್ಕೆ ಹೋಗಿ ಕಲಿತು ಬರುವುದೇ ದಕ್ಷಿಣ ಕನ್ನಡದವರು ವೈಶಿಷ್ಟ್ಯ. ಪಂಜೆಯವರು, ಮುಳಿಯ, ಗೋವಿಂದ ಪೈಗಳು ತಮ್ಮಲ್ಲೆ ಒಂದು ಸಮಾಜದ ಸೃಷ್ಟಿಸಿದರು ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ ಇಂದಿನ ಪ್ರಶಸ್ತಿ ನನ್ನ ಬದುಕಿನ ಭಾಗ್ಯ. ಮುಳಿಯ ತಿಮ್ಮಪ್ಪಯ್ಯನವರ ಬಗ್ಗೆ ಗೌರವವಿದೆ. ಇಂದು ಗಮಕ ವ್ಯಾಖ್ಯಾನ ರಂಗಕ್ಕೆ ಪ್ರಾಧ್ಯಾಪಕರು ಬರುತ್ತಾರೆ. ಪಾಠ ಮಾಡುವ ಕ್ರಮದಲ್ಲಿ ಗಮಕ ವ್ಯಾಖ್ಯಾನ ಸಲ್ಲದು. ಗಮಕದ ಮೂಲಕ ಕಾವ್ಯ ಪರಂಪರೆ ಬಗ್ಗೆ ಯುವಕರಿಗೆ ಆಸಕ್ತಿ ಹುಟ್ಟುವಂತಿರಬೇಕು. ಶಬ್ದದ ಮೂಲ ಅರ್ಥವನ್ನು ವ್ಯಾಖ್ಯಾನಕಾರರು ಹೇಳಬೇಕು ಎಂದರು.

ಆರಂಭದಲ್ಲಿ ಮುಳಿಯ ತಿಮ್ಮಪ್ಪಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್, ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಮನೋರಮ ಎಂ.ಭಟ್, ಮುಳಿಯರ ಪುತ್ರರಾದ ರಾಘವಯ್ಯ ಹಾಗೂ ಗೋಪಾಲಕೃಷ್ಣ ಭಟ್ ಹಾಗೂ ಮುಳಿಯ ಕುಟುಂಬದ ಸದಸ್ಯರು ಹಾಜರಿದ್ದರು.

ಪೂರ್ಣಪ್ರಜ್ಞಾ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಶಿವಕುಮಾರ್ ಅಳಗೋಡು ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಮುಳಿಯ ಗೋಪಾಲಕೃಷ್ಣ ಭಟ್ಟರು ಬರೆದ ಚಾಣಕ್ಯ ತಂತ್ರ ಪುಸ್ತಕವನ್ನು ನಾ. ದಾಮೋದರ ಶೆಟ್ಟಿ ಬಿಡುಗಡೆಗೊಳಿಸಿದರು. ಮುಳಿಯ ರಾಘವಯ್ಯ ಕೃತಿ ಪರಿಚಯ ಮಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಮೇಧಾ ಹಾಗೂ ವೈಭವಿ ಪ್ರಾರ್ಥಿಸಿ, ಪ್ರಶಸ್ತಿ ಸಮಿತಿ ಸದಸ್ಯರಾದಾ ಡಾ. ಆರ್. ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.