ರಾಮನಗರ: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕಾಲ ಬದಲಾಗಿದ್ದು, ಇಲ್ಲಿ ಸಿದ್ಧಾಂತದ ಜ್ಞಾನಕ್ಕಿಂತ ಪ್ರಾಯೋಗಿಕ ಮತ್ತು ಅನುಭವಾತ್ಮಕ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೃತಕ ಬುದ್ದಿಮತ್ತೆ(ಎಐ) ವೃತ್ತಿ ಕೇಂದ್ರ ಪ್ರಾರಂಭಿಸುವ ಹಾಗೂ ಆಂಗ್ಲ ಭಾಷೆಯಲ್ಲಿ ಕೌಶಲ ರೂಢಿಸುವ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೈಕ್ರೋಸಾಫ್ಟ್ ಮತ್ತು ಸ್ಯಾಪ್ ಸಂಸ್ಥೆಗಳ ಮುಂದಾಳತ್ವದಲ್ಲಿ ಎಐ-ಸೆಂಟರ್ ಆಫ್ ಎಕ್ಸೆಲೆನ್ಸ್ ಮತ್ತು ಸೈಮನ್ಸ್ ಕಂಪನಿಯವರು ಸ್ಥಾಪಿಸಿರುವ ಇನ್ನೋವೇಷನ್ ಹಬ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲಿಷ್‌ನಲ್ಲಿ ಸರಾಗವಾಗಿ ಮಾತನಾಡುವ ಸಾಮರ್ಥ್ಯ ಇಲ್ಲದಿದ್ದರೆ, ನೀವು ಪಡೆದ ಜ್ಞಾನದಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ್ದರಿಂದ ತಮ್ಮ ಇಲಾಖೆ ಬ್ರಿಟೀಷ್ ಕೌನ್ಸಿಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳ ಮೂಲಕ ಯುವ ಸಮುದಾಯದಲ್ಲಿ ಆಂಗ್ಲ ಭಾಷೆಯಲ್ಲಿ ಕೌಶಲಗಳನ್ನು ರೂಢಿಸಲು ಕಾರ್ಯಕ್ರಮ ಆಯೋಜಿಸಿದೆ. ಇದನ್ನು ಎಲ್ಲಾ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳಲ್ಲಿ ವಿಸ್ತರಿಸಲು ಉದ್ದೇಶಿಸಿದ್ದೇವೆ ಎಂದರು.ಇಂಗ್ಲಿಷ್ ದಕ್ಷತೆ ಬಹಳ ಮುಖ್ಯ ಎಂಬುದನ್ನು ಅರಿಯಬೇಕು. ಕೆಲ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಮಾತನಾಡಲು ಸ್ವಲ್ಪ ಹಿಂಜರಿಯುತ್ತಿದ್ದರು. ಗ್ರಾಮೀಣ ಹಿನ್ನೆಲೆಯ ಭಾವನೆಯೂ ಬೇಡ. ಶ್ರಮ ಮತ್ತು ಪ್ರಯತ್ನದಿಂದ ಯಾವುದನ್ನಾದರೂ ಕಲಿಯಬಹುದು. ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಕೌಶಲಗಳನ್ನು ರೂಢಿಸುವ ಕಾರ್ಯಕ್ರಮವನ್ನು ಅನುಸರಿಸಿ, ತರಬೇತಿ ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಈ ಕಾರ್ಯಕ್ರಮ ರಾಮನಗರದ ಸರ್ಕಾರಿ ಕಾಲೇಜಿಗೂ ವಿಸ್ತರಣೆಯಾಗಲಿದೆ ಎಂದರು.
ಸರ್ಕಾರಿ ಪದವಿ ಮತ್ತು ಇಂಜನಿಯರಿಂಗ್ ಕಾಲೇಜುಗಳಲ್ಲಿ ಕೈಗಾರಿಕಾ ಸಂಸ್ಥೆಗಳು ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿವೆ. ಇದು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ. ಇವು ವಿದ್ಯಾರ್ಥಿಗಳಲ್ಲಿ ಮುಂದಿನ ಹಂತಕ್ಕೆ ಸಾಗಲು ಅಗತ್ಯ ಕೌಶಲ್ಯಗಳನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ವೈದ್ಯಕೀಯ ಕಾಲೇಜುಗಳಷ್ಟು ಬೇಡಿಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.ಎಐ ವೃತ್ತಿ ಕೇಂದ್ರಗಳ ಸ್ಥಾಪನೆ:
ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಯುವತಿಯರಿಗಾಗಿಯೇ ಕೃತಕ ಬುದ್ದಿಮತ್ತೆ ವೃತ್ತಿ ಕೇಂದ್ರಗಳನ್ನು ಮೈಕ್ರೋಸಾಫ್ಟ್ ಮತ್ತು ಸ್ಯಾಪ್ ಸಂಸ್ಥೆಗಳ ಮುಂದಾಳತ್ವದಲ್ಲಿ ಸ್ಥಾಪಿಸುವ ಉದ್ದೇಶವಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಕೇಂದ್ರ ಸ್ಥಾಪನೆಯಾಗಲಿದೆ ಎಂದರು.
ಸೈಮನ್ಸ್ ಮತ್ತು ಸ್ಮೈಲ್ ಫೌಂಡೇಷನ್ ಸಂಸ್ಥೆಗಳು “ಟೆಕ್ ಫಾರ್ ಸೊಸೈಟಿ” ಎಂಬ ಕಾರ್ಯಕ್ರಮ ಜಾರಿಗೆ ತರುತ್ತಿವೆ. ಇದು ಎಂಜಿನಿಯರಿಂಗ್ ಶಿಕ್ಷಣದಲ್ಲಿ ಹೊಸ ಅವಿಷ್ಕಾರ ನಿರ್ಮಿಸಲಿದೆ. ಕೆಲವು ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸೀಟುಗಳನ್ನು ಹೆಚ್ಚಿಸಲು ಪ್ರಸ್ತಾಪಿಸಿವೆ. ಆಟೋಮೊಬೈಲ್, ಎಲೆಕ್ಟ್ರಿಕಲ್ ವಿಭಾಗದ ಸೀಟುಗಳನ್ನು ಕಡಿಮೆ ಮಾಡಲು ಸಲಹೆ ನೀಡಿವೆ. ಆದರೆ, ಸಿವಿಲ್ ಎಂಜಿನಿಯರಿಂಗ್ ಎಂದಿಗೂ ನಾಶವಾಗುವುದಿಲ್ಲ. ಸಿವಿಲ್ ಎಂಜಿನಿಯರಿಂಗ್ ಇಲ್ಲದೆ ನಾವು ಈ ಕಟ್ಟಡದಲ್ಲೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಟ್ಟಡಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿ ಎಲ್ಲವೂ ಸಿವಿಲ್ ಇಂಜಿನಿಯರ್‌ನಿಂದಲೇ ಸಾಧ್ಯ ಎಂದು ಹೇಳಿದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಎಲ್ಲಾ ಕ್ಷೇತ್ರಗಳಿಗೂ ಮೂಲವಾಗಿದೆ. ಏರೋಸ್ಪೇಸ್ ಅಥವಾ ಇತರೆ ತಂತ್ರಜ್ಞಾನಗಳಲ್ಲಿ ಯಾವುದಾದರೂ ಭಾಗ ತಯಾರಿಸಲು ಮೆಕ್ಯಾನಿಕಲ್ ಜ್ಞಾನ ಅಗತ್ಯವಿದೆ. ನಾವು ಈ ತಂತ್ರಜ್ಞಾನಗಳನ್ನು ಪಠ್ಯಕ್ರಮಕ್ಕೆ ತರಬೇಕು ಮತ್ತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡಬೇಕು. ಅವರು ಸಾಧನಗಳನ್ನು ಬಳಸುವ ಮೂಲಕ ಸಮಾಜದ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಸುಧಾಕರ್ ಸಲಹೆ ನೀಡಿದರು.ಶಾಸಕ ಇಕ್ಬಾಲ್‌ಹುಸೇನ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ, ತಾಂತ್ರಿಕ ಶಿಕ್ಷಣದ ಹೆಚ್ಚುವರಿ ನಿರ್ದೇಶಕರಾದ ನಾಗಭೂಷಣ್, ಪ್ರಾಂಶುಪಾಲ ಜಿ.ಪುಂಡರೀಕ, ಮೈಕ್ರೋಸಾಫ್ಟ್ ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕ ಕಿಶೋಕ್ ಕುಮಾರ್, ಸ್ಯಾಪ್‌ನ ಪ್ರಾಡಕ್ಟ್ ಸಪೋರ್ಟ್ ವಿಭಾಗದ ವಾಸಿಂ ಉಲ್ಲಾ ಖಾನ್, ಎಡುನೆಟ್ ಉಪಾಧ್ಯಕ್ಷ ವೈಭವ್ ವತ್ಸಲ್, ಸೈಮೆನ್ಸ್ ಕಂಪನಿಯ ರಿಸರ್ಚ್ ಆಂಡ್ ಡೆವೆಲಪ್‌ಮೆಂಟ್ ಟೆಕ್ನಾಲಜಿಯ ಉಪಾಧ್ಯಕ್ಷರಾದ ಸುಜಾತ ಮುಕುಂದನ್, ಸ್ಮೈಲ್ ಫೌಂಡೇಷನ್‌ನ ಪ್ರಮುಖರಾದ ಸೀಮಂತ್ ಕುಮಾರ್, ರೇಷ್ಮಾ ಗುಪ್ತ, ಟೊಯೋಟಾ ಸಂಸ್ಥೆಯ ಉಪಾಧ್ಯಕ್ಷ ರಮೇಶ್ ರಾವ್, ಜನರಲ್ ಮೇನೇಜರ್ ಕಿರಣ್ ಉಪಸ್ಥಿತರಿದ್ದರು.
ಕೋಟ್ ..................ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ ಉದ್ಯೋಗ ಅರಸುವವರಾಗದೆ, ಉದ್ಯೋಗ ನೀಡುವಂತರಾಗಿ ಬೆಳೆಯಬೇಕು. ಉದ್ಯೋಗ ಮಾರುಕಟ್ಟೆಯಲ್ಲಿ ಕೌಶಲ್ಯ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರಕೋಟ್ ...........
ಸರಿಯಾದ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗದಿದ್ದರೂ ಚಿಂತಿಸಬೇಡಿ, ಸಕ್ರಿಯವಾಗಿರಿ. ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಸರ್ಕಾರಿ ಕೋಟದಲ್ಲಿ ಸರ್ಕಾರಿರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಬಗ್ಗೆ ಹೀನಭಾವನೆ ಬೇಡ. ಉತ್ತಮ ಅಂಕಗಳನ್ನು ಗಳಿಸಿದ್ದರಿಂದಲೇ ಇಲ್ಲಿಗೆ ಆಯ್ಕೆಯಾಗಿದ್ದೀರಿ. ನಿಮ್ಮಲ್ಲಿ ಪ್ರತಿಭೆ ಇದೆ ಅದನ್ನು ಬಳಸಿಕೊಳ್ಳಿ.-ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವರು
4ಕೆಆರ್ ಎಂಎನ್ 4,5.ಜೆಪಿಜಿ4.ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವೇದಿಕೆ ಸಮಾರಂಭವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು.
5.ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಮಾಲೋಚನೆ ನಡೆಸಿದರು. ಶಾಸಕ ಇಕ್ಬಾಲ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.