ಸಾಮಾಜಿಕ ಬಹಿಷ್ಕಾರ ತಡೆ ಸೇರಿದಂತೆ ಬೆಳಗಾವಿ ಅಧಿವೇಶನದಲ್ಲಿ 20ಕ್ಕೂ ಹೆಚ್ಚು ಮಹತ್ವದ ಬಿಲ್‌ಗಳ ಮಂಡನೆಯಾಗಲಿವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ಹುಬ್ಬಳ್ಳಿ: ಸಾಮಾಜಿಕ ಬಹಿಷ್ಕಾರ ತಡೆ ಸೇರಿದಂತೆ ಬೆಳಗಾವಿ ಅಧಿವೇಶನದಲ್ಲಿ 20ಕ್ಕೂ ಹೆಚ್ಚು ಮಹತ್ವದ ಬಿಲ್‌ಗಳ ಮಂಡನೆಯಾಗಲಿವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ ಬಹಿಷ್ಕಾರ ಅನಿಷ್ಟ ಪದ್ಧತಿ, ಇದನ್ನು ತಡೆಯಬೇಕು. ಈ ಹಿನ್ನೆಲೆಯಲ್ಲಿ ಈ ಅಧಿವೇಶನದಲ್ಲಿ ಬಿಲ್ ಮಂಡನೆಯಾಗಲಿದೆ. ಇದೂ ಸೇರಿದಂತೆ ಅನೇಕ ವಿಷಯಗಳ ಮೇಲೆ 20ಕ್ಕೂ ಹೆಚ್ಚು ಬಿಲ್ ಮಂಡನೆ ಮಾಡುವ ಸಿದ್ಧತೆ ಮಾಡಿಕೊಂಡಿದ್ದೇವೆ. ಕಾನೂನು ಸುವ್ಯವಸ್ಥೆ ಸುಧಾರಣೆಗೆ ಇಂತಹ ಮಸೂದೆ ಮಂಡನೆ ಅವಶ್ಯಕವಾಗಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಹ ಪಡೆಯಲಾಗಿದೆ. ಬೆಳಗಾವಿಯ ಅಧಿವೇಶನದಲ್ಲಿ ಅವುಗಳ ಕುರಿತು ಚರ್ಚೆ ನಡೆಸಿದ ನಂತರ ಮಹತ್ವದ ಬಿಲ್ ಜಾರಿಗೆ ತರಲಾಗುವುದು ಎಂದರು.ಸಿಎಂ ಬದಲು-ಹೈಕಮಾಂಡ್ ಸ್ವತಂತ್ರ
ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಪಕ್ಷದ ಯಾವುದೇ ವಿಷಯದ ಬಗ್ಗೆ ನಿರ್ಣಯ ಕೈಗೊಳ್ಳಲು ಹೈಕಮಾಂಡ್ ಸ್ವತಂತ್ರವಾಗಿದೆ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಉಳಿದಂತೆ ಪಕ್ಷದಲ್ಲಿನ ಅಲ್ಪ-ಸ್ವಲ್ಪ ಸಮಸ್ಯೆಯನ್ನು ಅಧಿವೇಶನದ ನಂತರ ಬಗೆಹರಿಯುತ್ತದೆ ಎಂದು ಸ್ವತಃ ಸಿಎಂ, ಡಿಸಿಎಂ ಅವರೇ ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.ಇಂಡಿಗೋ ಸಮಸ್ಯೆ ಪರಿಹರಿಸಿ
ದೇಶದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತದಿಂದ ಪ್ರಯಾಣಿಕರು ಬಹಳಷ್ಟುಸಮಸ್ಯೆ ಎದುರಿಸುತ್ತಿದ್ದಾರೆ. ತುರ್ತು ಸೇವೆಗೆ ಹೋಗುವವರು ಪರದಾಡುವಂತಾಗಿದೆ. ಇದು ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ಮತ್ತು ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದರು.ರಾಜಭವನ ಹೆಸರು ಬದಲಾವಣೆಗೆ ಒಪ್ಪಿಗೆಯಿಲ್ಲ
ರಾಜಭವನವನ್ನು ಲೋಕಭವನ ಎಂದು ಹೆಸರು ಬದಲಾವಣೆ ಮಾಡಲು ನಮ್ಮ ಸಚಿವ ಸಂಪುಟದ ಒಪ್ಪಿಗೆ ಇಲ್ಲ. ಈ ಸಂಬಂಧ ರಾಜ್ಯಪಾಲರ ಬಳಿ ಹೋಗಿ, ಮೂಲ ಹೆಸರನ್ನೇ ಉಳಿಸಿಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ರಾಜ್ಯಪಾಲರಿರುವ ಭವನ ರಾಜಭವನವಾಗುತ್ತದೆ. ಈಗ ಅದನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಲೋಕ ಭವನ ಎಂದು ನಾಮಕರಣ ಮಾಡಲು ಹೊರಟಿರುವುದು ಸರಿಯಲ್ಲ. ಹೆಸರು ಬದಲಾವಣೆಯಿಂದ ರಾಜ್ಯಪಾಲರನ್ನು ಲೋಕಪಾಲ್ ಅಂತಾ ಕರೆಯುವುದಕ್ಕೆ ಆಗುತ್ತದೆಯೇ ಎಂದು ಸಚಿವ ಪಾಟೀಲ ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಈ ನಡೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲ. ಎಲ್ಲಿಯ ವರೆಗೆ ರಾಜ್ಯಪಾಲರು ಇರುತ್ತಾರೆಯೋ ಅಲ್ಲಿಯ ವರೆಗೆ ರಾಜಭವನ ಎಂಬ ಹೆಸರೇ ಇರುತ್ತದೆ. ಅದನ್ನು ಬದಲಾಯಿಸುವುದು ಸರಿಯಲ್ಲ ಎಂದರು.