ಹನುಮಸಾಗರ: ಪತ್ರಿಕಾ ವಿತರಕರು ಪ್ರತಿದಿನ ಬೆಳಗಿನ ಜಾವ ಮಳೆ, ಗಾಳಿ, ಚಳಿ ಸೇರಿದಂತೆ ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸದೆ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಮೂಲಕ ಸಮಾಜಕ್ಕೆ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ಪ್ರಭು ಡಿಪೋ ಹೇಳಿದರು.

ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿ ಸೋಮವಾರ ಕನ್ನಡ ದಿನಪತ್ರಿಕೆಗಳ ವಿತರಕರಿಗೆ ಪೆನ್‌ ಹಾಗೂ ನೋಟ್‌ಬುಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಪತ್ರಿಕಾ ವಿತರಕರು ಪ್ರತಿದಿನ ಬೆಳಗಿನ ಜಾವ ಮಳೆ, ಗಾಳಿ, ಚಳಿ ಸೇರಿದಂತೆ ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸದೆ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಮೂಲಕ ಸಮಾಜಕ್ಕೆ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಜನರಿಗೆ ದಿನನಿತ್ಯದ ಮಾಹಿತಿ, ಸುದ್ದಿ ಹಾಗೂ ಜಾಗೃತಿಯನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.ಪತ್ರಿಕಾ ವಿತರಕರ ಸೇವೆಯನ್ನು ಸ್ಮರಿಸಿ, ಅವರಿಗೆ ಅಗತ್ಯವಾದ ಪೆನ್‌ ಮತ್ತು ನೋಟ್‌ಬುಕ್‌ಗಳನ್ನು ವಿತರಿಸಿ ಗೌರವಿಸಿದರು.

ಹಿರಿಯ ಪತ್ರಕರ್ತ ಶ್ರೀನಿವಾಸ ಜಹಗೀರದಾರ ಮಾತನಾಡಿ, ಪತ್ರಿಕೆ ಓದುಗರಿಗೆ ಸಮಯಕ್ಕೆ ಸರಿಯಾಗಿ ಪತ್ರಿಕೆ ತಲುಪಿಸುವ ಜವಾಬ್ದಾರಿಯನ್ನು ವಿತರಕರು ನಿಷ್ಠೆಯಿಂದ ನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಹಲವಾರು ವರ್ಷಗಳಿಂದ ಪೆನ್‌, ನೋಟ್‌ಬುಕ್ ಸೇರಿದಂತೆ ವಿವಿಧ ರೀತಿಯ ಉಪಯುಕ್ತ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಏಕನಾಥ ಮೆದಿಕೇರಿ ಮಾತನಾಡಿ, ಪತ್ರಿಕಾ ವಿತರಕರು ಪತ್ರಿಕೆ ಮತ್ತು ಓದುಗರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪರಿಶ್ರಮದಿಂದಲೇ ಪತ್ರಿಕೆಗಳು ಜನರ ಕೈ ಸೇರುತ್ತವೆ. ಇಂತಹ ಸೇವೆಯನ್ನು ಸಮಾಜ ಸದಾ ಗೌರವಿಸಬೇಕು. ಪತ್ರಿಕಾ ವಿತರಕರ ಶ್ರಮ ಮತ್ತು ಸಮರ್ಪಣೆಯು ಮಾದರಿಯಾಗಿದೆ. ದಿನದ ಆರಂಭವೇ ಅವರು ನೀಡಿದ ಪತ್ರಿಕೆ ಓದುವುದರಿಂದ ಆರಂಭವಾಗುತ್ತದೆ. ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ವಸಂತ ಸಿನ್ನೂರ ಹುಸೇನ ಕಟಗಿ, ತಿಪ್ಪಣ್ಣ ಕಬ್ಬರಗಿ, ವೆಂಕಟೇಶ ಹೊಸಮನಿ ಸೇರಿದಂತೆ ಅನೇಕ ಪತ್ರಿಕಾ ವಿತರಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.