ನಗರಸಭೆಯಿಂದ ಬೀದಿದೀಪಗಳ ಅಸಮರ್ಪಕ ನಿರ್ವಹಣೆ

| Published : May 12 2024, 01:24 AM IST

ಸಾರಾಂಶ

ನಗರದ ಗೌರಿಪೇಟೆ, ಅಂತರಗಂಗೆ ರಸ್ತೆ, ಕೀಲುಕೋಟೆ, ಜಯನಗರ, ಪಿ.ಸಿ.ಬಡಾವಣೆ, ಮುನೇಶ್ವರ ನಗರ, ಕಾರಂಜಿಕಟ್ಟೆ, ಗಾಂಧಿನಗರ, ರಹಮತ್‌ನಗರ, ಶಹಿನ್‌ಷಾ ನಗರ ಹೀಗೆ ಹಲವು ಕಡೆ ಹಗಲಲ್ಲೂ ಬೀದಿ ದೀಪಗಳು ಉರಿಯುತ್ತಿವೆ. ಅಧಿಕಾರಿಗಳು ಇದನ್ನು ಕಂಡರೂ ಕಾಣದಂತೆ ಮುನ್ನಡೆಯುತ್ತಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ವಿದ್ಯುತ್ ನ ಕಣ್ಣಾಮುಚ್ಚಾಲೆ ಆರಂಭವಾಗುವುದು ಸಾಮಾನ್ಯ, ವಿದ್ಯುತ್ ಕೊರತೆ ಎದುರಿಸುತ್ತಿರುವ ಬಗ್ಗೆ ಅರಿವಿದ್ದರೂ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಬೀದಿದೀಪ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ೩೫ ವಾರ್ಡ್‌ಗಳಿದ್ದು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬೀದಿದೀಪಗಳನ್ನು ನಗರಸಭೆಯಿಂದ ವಿವಿಧ ಯೋಜನೆಗಳಡಿ ಅಳವಡಿಸಲಾಗಿದೆ. ಅದರ ನಿರ್ವಹಣೆಗೆ ಆಯಾ ಬಡಾವಣೆಯ ಗುತ್ತಿಗೆದಾರನಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಸಿಬ್ಬಂದಿಯ ಉದಾಸೀನದಿಂದ ನಗರದ ಹಲವು ರಸ್ತೆಗಳಲ್ಲಿ ಬೀದಿದೀಪ ಹಗಲಲ್ಲೂ ಬೆಳಗುತ್ತಿವೆ.

ನಗರದ ಗೌರಿಪೇಟೆ, ಅಂತರಗಂಗೆ ರಸ್ತೆ, ಕೀಲುಕೋಟೆ, ಜಯನಗರ, ಪಿ.ಸಿ.ಬಡಾವಣೆ, ಮುನೇಶ್ವರ ನಗರ, ಕಾರಂಜಿಕಟ್ಟೆ, ಗಾಂಧಿನಗರ, ರಹಮತ್‌ನಗರ, ಶಹಿನ್‌ಷಾ ನಗರ ಹೀಗೆ ಹಲವು ಕಡೆ ಹಗಲಲ್ಲೂ ಬೀದಿ ದೀಪಗಳು ಉರಿಯುತ್ತಿವೆ. ಅಧಿಕಾರಿಗಳು ಇದನ್ನು ಕಂಡರೂ ಕಾಣದಂತೆ ಮುನ್ನಡೆಯುತ್ತಾರೆ.

ನಗರ ವ್ಯಾಪ್ತಿಯಲ್ಲಿನ ಕೆಲವು ಬಡಾವಣೆಗಳಲ್ಲಿ ಆಗಾಗ್ಗೆ ಬೀದಿದೀಪಗಳು ಕೈಕೊಡುತ್ತವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ ದೂರು ನೀಡಿದರೂ ಶೀಘ್ರ ಸರಿಪಡಿಸುವ ಕೆಲಸ ಮಾಡುವುದಿಲ್ಲ. ಮತ್ತೊಂದೆಡೆ ಹಗಲಿನಲ್ಲಿ ಉರಿಯುವ ದೀಪಗಳನ್ನು ಬಂದ್ ಮಾಡುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪರ್ಕಕ್ಕೆ ಸಿಗದ ಸಿಬ್ಬಂದಿಯ ದೂರವಾಣಿ:

ನಗರದಲ್ಲಿ ಬೀದಿದೀಪಗಳ ಸಮಸ್ಯೆ ಕಂಡುಬಂದರೆ ದೂರು ನೀಡಲು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ಆ ಸಿಬ್ಬಂದಿಯ ದೂರವಾಣಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುವುದಿಲ್ಲ. ಸಾರ್ವಜನಿಕರ ದೂರನ್ನು ನಗರಸಭೆ ಸಿಬ್ಬಂದಿ ದಾಖಲಿಸಿಕೊಂಡು ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರನಿಗೆ ಮಾಹಿತಿ ನೀಡಿ ಸರಿಪಡಿಸಬೇಕು. ಆದರೆ, ಅಧಿಕಾರಿಗಳಿಗೆ ದೂರು ಹೋದರೂ ನೋಂದಾಯಿಸಿಕೊಳ್ಳದೇ ಉದಾಸೀನ ತೋರುತ್ತಾರೆ. ನಿರ್ವಹಣೆ ಹೊಣೆ ಹೊತ್ತವರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬೀದಿದೀಪಗಳ ನಿರ್ವಹಣೆಗೆಂದು ವಾರ್ಷಿಕವಾಗಿ ನಗರಸಭೆಯ ಬಜೆಟ್‌ನಲ್ಲಿ ಕೋಟ್ಯಾಂತರ ರು.ಮೀಸಲಿರಿಸಲಾಗುತ್ತದೆ. ಗುತ್ತಿಗೆದಾರ ನಿರ್ವಹಣೆ ಮಾಡಿದ ಆಧಾರದ ಮೇರೆಗೆ ನಗರಸಭೆಯಿಂದ ಬಿಲ್ ಬಿಡುಗಡೆ ಮಾಡಬೇಕು. ಪ್ರತಿದಿನ ದೀಪಗಳನ್ನು ಆನ್ ಮತ್ತು ಆಫ್ ಮಾಡುವುದು ಗುತ್ತಿದಾರನ ಜವಾಬ್ದಾರಿಯಾಗಿರುತ್ತದೆ. ಲಕ್ಷಾಂತರ ರು. ಹಣ ವೆಚ್ಚ ಮಾಡಿ ಎಲ್‌ಇಡಿ ಬಲ್ಬ್ ಅಳವಡಿಸಲಾಗಿದೆ. ಹಗಲಲ್ಲಿ ಬೀದಿದೀಪ ನಂದಿಸಲು ಸಾಧ್ಯವಾಗದಿದ್ದರೆ ಸ್ಥಳೀಯ ವಾಟರ್ ಮನ್‌ಗೆ ಜವಾಬ್ದಾರಿ ನೀಡಬೇಕು.

ಸಾರ್ವಜನಿಕರಿಗೆ ವೈಜ್ಞಾನಿಕವಾಗಿ ಬೀದಿದೀಪ ನಂದಿಸಲು ಸ್ವೀಚ್ ಅಳವಡಿಸಿರುವುದಿಲ್ಲ, ವೈರ್‌ಗಳನ್ನು ನೇತಾಕಿರುತ್ತಾರೆ. ಇದರಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳಿಗೆ ಸ್ವೀಚ್ ಅಳವಡಿಸದೇ ಇರುವುದರಿಂದ ಶ್ಯಾರ್ಟ್ ಸರ್ಕ್ಯೂಟ್ ಆಗುವ ಸಂಭವ ಹೆಚ್ಚು.ಇದರಿಂದ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ, ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ವಿದ್ಯುತ್ ಕಂಬಗಳಿಗೆ ಸಮರ್ಪಕವಾಗಿ, ಸರಿಯಾಗಿ ದ್ವೀಪಗಳನ್ನು ಅಳವಡಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.