ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಿ ಹತ್ತರೊಳಗೆ ತನ್ನಿ: ಸಚಿವ ಡಿ.ಸುಧಾಕರ್

| Published : Sep 06 2024, 01:03 AM IST

ಸಾರಾಂಶ

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು. ಸಂಸದ ಗೋವಿಂದ ಎಂ ಕಾರಜೋಳ ಇದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನಕ್ಕೆ ಕುಸಿದಿದ್ದು ಗಾಬರಿ ತರುವ ವಿಷಯವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶವ ಸುಧಾರಿಸಿ ಜಿಲ್ಲೆಯನ್ನು ಮೊದಲ ಹತ್ತು ಸ್ಥಾನದೊಳಗೆ ತರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಾಕೀತು ಮಾಡಿದರು.

ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಬರಗಾಲ ಪೀಡಿತ ಪ್ರದೇಶವಾಗಿದೆ. ಪರಿಶಿಷ್ಟ ಜಾತಿ, ವರ್ಗ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜನರ ಸಂಖ್ಯೆ ಹೆಚ್ಚಿದೆ. ಇವರಿಗೆ ಶಿಕ್ಷಣ ಹೊರತು ಬೇರೆ ಅವಕಾಶವಿಲ್ಲ, ಶಿಕ್ಷಿತರಾದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಬರಲು ಅವಕಾಶ ದೊರಕುತ್ತದೆ. ಜಿಲ್ಲೆಯ ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಅರಿತು ಶಿಕ್ಷಕರು ಕಾರ್ಯನಿರ್ವಹಿಸಬೇಕೆಂದರು.

ಶಿಕ್ಷಕ ಸ್ಥಾನಕ್ಕೆ ಬೆಲೆ ಕಟ್ಟಲಾಗದು. ಸ್ವತಃ ನಾನು ಪದವಿ ಶಿಕ್ಷಣ ಪೂರೈಸಿದ್ದೇನೆ ಎಂದರೆ ಅದಕ್ಕೆ ಚಿಕ್ಕಂದಿನಲ್ಲಿ ನನಗೆ ಪಾಠ ಹೇಳಿದ ಶಿಕ್ಷಕರು ಕಾರಣ. ದೇಶ ಹಾಗೂ ರಾಜ್ಯದಲ್ಲಿ ಸರ್ಕಾರಗಳು ಸಾವಿರಾರು ಕೋಟಿ ರು. ಹಣವನ್ನು ಶಿಕ್ಷಣದ ಮೇಲೆ ಖರ್ಚು ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಕರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ರಾಜ್ಯದಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಲಾಗಿದೆ. 2017ಕ್ಕಿಂತ ಮೊದಲು ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರ ಬಡ್ತಿ ಸಮಸ್ಯೆ ಹಾಗೂ ಇತರೆ ಬೇಡಿಕೆಗಳಿಗೆ ಪರಿಹಾರ ದೊರಕಿಸಲು ಸಮಿತಿ ರಚಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.ಸ್ವಚ್ಛತೆ ಎಂದರೆ ಕೀಳು ಎಂಬ ಮನೋಭಾವ:

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಈ ಹಿಂದೆ ಶಿಕ್ಷಕರು ನಮ್ಮನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸಿ ಪಾಠ ಹೇಳಿಕೊಡುತ್ತಿದ್ದರು. ತಪ್ಪು ಮಾಡಿದರೆ ಶಿಕ್ಷಿಸುತ್ತಿದ್ದರು. ಇದನ್ನು ಪಾಲಕರು ಸಹ ಒಪ್ಪಿದ್ದರು. ಈಗ ಮಕ್ಕಳನ್ನು ದಂಡಿಸಿದರೆ, ಪಾಲಕರು ಶಿಕ್ಷಕರ ಮೇಲೆ ಜಗಳಕ್ಕೆ ಹೋಗುತ್ತಾರೆ. ಇನ್ನು ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಶಿಕ್ಷಕರು ಮಕ್ಕಳನ್ನು ಶೌಚಾಲಯ ತೊಳಿಯಲು ಹಚ್ಚಿದ್ದಾರೆ ಎನ್ನುವ ವಿಡಿಯೋ ಹರಿದಾಡಿಸಿ, ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡ ಪ್ರಸಂಗವೂ ಜರುಗಿವೆ ಎಂದರು.

ಮುಂದುವರಿದ ಜಪಾನ್ ದೇಶದಲ್ಲಿ ಇಂದಿಗೂ ಶಿಕ್ಷಕರು ಹಾಗೂ ಮಕ್ಕಳೇ ಅಲ್ಲಿನ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ನಾನು ಓದುವಾಗ ನಮ್ಮ ಹಾಸ್ಟೆಲ್ ಕಸವನ್ನು ನಾವೇ ಗುಡಿಸಿ ಸ್ವಚ್ಛಗೊಳಿಸಿದ್ದೇವೆ. ಇಂದು ಮಕ್ಕಳ ಕೈಗೆ ಪೊರಕೆ ನೀಡಿದರೆ ಅಪರಾಧ ಎನ್ನುವ ಪರಿಸ್ಥಿತಿ ಎದುರಾಗಿದೆ. ಇಂತಹ ಘಟನೆಗಳಿಂದ ಮಕ್ಕಳಿಗೆ ಸ್ವಚ್ಛತೆ ಮಾಡುವ ಕೆಲಸ ಕೀಳು ಎಂಬ ಭಾವನೆ ಮೂಡುತ್ತಿದೆ. ಇದರ ಬದಲಾಗಿ ಸ್ವಚ್ಛತೆ ಬಗ್ಗೆ ಮಕ್ಕಳಿಗೆ ಕಲಿಸಿಕೊಡುವುದು ಅವಶ್ಯಕವಿದೆ ಎಂದು ಗೋವಿಂದ ಕಾರಜೋಳ ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ದಿನ ಇದಾಗಿದ್ದು ವೃತ್ತಿಗೆ ನ್ಯಾಯ ಒದಗಿಸಿದ್ದೇವೆಯೇ ಎಂದು ಚಿಂತನೆ ನಡೆಸಬೇಕಿದೆ. ಇಂದು ಪದವಿ ಪಡೆದ ಶಿಕ್ಷಕರು ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ವಿಫಲರಾಗುತ್ತಿದ್ದೇವೆ. 20ರಿಂದ 25 ವಯಸ್ಸಿನ ಸುಮಾರು 40 ರಿಂದ 70 ಮಕ್ಕಳು ಜಿಲ್ಲಾ ಕಾರಾಗೃಹದಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧನವಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಬಾಲಗರ್ಭಿಣಿಯರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಶಿಕ್ಷಕರು ಈ ಬಗ್ಗೆ ನಿಗಾ ವಹಿಸಬೇಕು. ಯೋಧರು, ರೈತರಂತೆ, ಶಿಕ್ಷಕರು ಕೂಡ ದೇಶ ನಿರ್ಮಾಣಕ್ಕೆ ಮುಖ್ಯವಾಗಿದ್ದಾರೆ ಎಂದರು.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಭಾಜನರದ 24 ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಸುಮಿತಾ ರಘು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಸಿಟಿಇ ಪ್ರಾಂಶುಪಾಲ ಹಾಗೂ ಪದನಿಮಿತ್ತ ಸಹ ನಿದೇಶಕಿ ಟಿ.ಜಿ.ಲೀಲಾವತಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ, ಡಯಟ್ ಪ್ರಾಂಶುಪಾಲ ಎಂ.ನಾಸೀರುದ್ದೀನ್, ಕ್ಷೇತ್ರಶಿಕ್ಷಣಾಧಿರಿ ನಾಗಭೂಷಣ್ ಸೇರಿದಂತೆ ವಿವಿಧ ಶಿಕ್ಷಕ ಸಂಘಟನೆಗಳ ಜಿಲ್ಲಾಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.