ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಆಲಮಟ್ಟಿ ಜಲಾಶಯವು ಉತ್ತರ ಕರ್ನಾಟಕ ಜನರ ಜೀವನಮಟ್ಟ ಸುಧಾರಿಸುವುದರೊಂದಿಗೆ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಈಶ್ವರ ತೇರದಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ಆಲಮಟ್ಟಿ ಜಲಾಶಯವು ಉತ್ತರ ಕರ್ನಾಟಕ ಜನರ ಜೀವನಮಟ್ಟ ಸುಧಾರಿಸುವುದರೊಂದಿಗೆ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಈಶ್ವರ ತೇರದಾಳ ಹೇಳಿದರು.ಬಾಗಲಕೋಟೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ಸಿ ವೃಂದದ ನೌಕರರು ಮತ್ತು ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಪರಿಚಯಾತ್ಮಕ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಜಲಸಂಪನ್ಮೂಲದಿಂದ ನಿರ್ಮಾಣಗೊಂಡ ಆಲಮಟ್ಟಿ ಜಲಾಶಯವು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕೃಷಿ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವಲ್ಲಿ ನೆರವಾಗಿದೆ ಎಂದರು.ಕಬ್ಬು, ಜೋಳ, ದ್ರಾಕ್ಷಿ, ದಾಳಿಂಬೆ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಉತ್ಪಾದನೆ ಹಾಗೂ ಬೆಳೆ ವೈವಿಧ್ಯೀಕರಣಕ್ಕೆ ಅವಕಾಶ ದೊರೆತಿದೆ. ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿನ ನಿರ್ವಹಣೆಗೂ ಸಹಕಾರಿಯಾಗಿದೆ ಎಂದು ಈಶ್ವರ ತಿಳಿಸಿದರು.ಜಿಲ್ಲಾ ತರಬೇತಿ ಸಂಸ್ಥೆಯ ಬೋಧಕ ಮಲ್ಲಿಕಾರ್ಜುನ ಗುಡೂರ ಮಾತನಾಡಿ, ಕೃಷಿ, ತೋಟಗಾರಿಕೆ, ಸಕ್ಕರೆ ಕಾರ್ಖಾನೆಗಳು, ಕೃಷಿ ಆಧಾರಿತ ಕೈಗಾರಿಕೆಗಳು ಹಾಗೂ ಕೃಷಿ ಸಂಸ್ಕರಣೆಗಳು ಜಿಲ್ಲೆಯ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಪ್ರಮುಖವಾಗಿವೆ ಎಂದು ತಿಳಿಸಿದರು.ಬೋಧಕ ವಿಜಯಕುಮಾರ ಉತ್ನಾಳ ಮಾತನಾಡಿ, ಪಟ್ಟದಕಲ್ಲು, ಬಾದಾಮಿ, ಐಹೊಳೆ, ಮಹಾಕೂಟ ಹಾಗೂ ಬಾದಾಮಿ ಕೋಟೆಯಂತಹ ಐತಿಹಾಸಿಕ ತಾಣಗಳು, ಇಳಕಲ್ ಸೀರೆ ಮತ್ತು ಮುಧೋಳ ನಾಯಿ ತಳಿಯಂತಹ ಸ್ಥಳೀಯ ಸಂಪನ್ಮೂಲಗಳು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.ಮುಖ್ಯಅತಿಥಿ ಹಾಗೂ ತರಬೇತಿ ಸಂಯೋಜಕರಾಗಿ ಡಾ.ಸಿದ್ದರಾಮ.ಎಚ್.ಎಂ ಭಾಗವಹಿಸಿ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ತರಬೇತಿಯಲ್ಲಿ ವಿವಿಧ ಇಲಾಖೆಗಳ 45 ಸಿ ವೃಂದದ ನೌಕರರು ಭಾಗವಹಿಸಿದ್ದರು.