ಬಸವ ತತ್ವಸಿದ್ಧಾಂತಗಳ ಪಾಲನೆಯಿಂದ ಸಮಾಜದಲ್ಲಿ ಸುಧಾರಣೆ

| Published : Sep 27 2025, 12:00 AM IST

ಸಾರಾಂಶ

ರಾಮನಗರ: ಪ್ರತಿಯೊಬ್ಬ ಮನುಷ್ಯ ಜಗಜ್ಯೋತಿ ಬಸವಣ್ಣ ಅವರ ತತ್ವ ಸಿದ್ಧಾಂತಗಳೊಂದಿಗೆ ಒಡನಾಡ ಇಟ್ಟುಕೊಂಡು ಪಾಲನೆ ಮಾಡಿದರೆ ಸಮಾಜದಲ್ಲಿ ಸುಧಾರಣೆ ತರಬಹುದು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ರಾಮನಗರ: ಪ್ರತಿಯೊಬ್ಬ ಮನುಷ್ಯ ಜಗಜ್ಯೋತಿ ಬಸವಣ್ಣ ಅವರ ತತ್ವ ಸಿದ್ಧಾಂತಗಳೊಂದಿಗೆ ಒಡನಾಡ ಇಟ್ಟುಕೊಂಡು ಪಾಲನೆ ಮಾಡಿದರೆ ಸಮಾಜದಲ್ಲಿ ಸುಧಾರಣೆ ತರಬಹುದು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನೆಗಳು ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಮತ್ತು ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿ, ಬಸವಣ್ಣಯವರ ಹೆಸರು ಸಮಾಜ ಸುಧಾರಣೆಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದೆ ಎಂದರು.

ಸಮಾಜದಲ್ಲಿ ಸಾಮರಸ್ಯ, ಸಮಾನತೆ, ಸಮಸ್ತತೆ ಇರಬೇಕು. ಎಲ್ಲರಲ್ಲು ದ್ವೇಷ ಭಾವನೆ ಕಡಿಮೆಯಾಗಿ ಮನುಷ್ಯರನ್ನಾಗಿ ಕಾಣಬೇಕು ಎಂಬುದು ಬಸವಣ್ಣನವರ ಪರಿಕಲ್ಪನೆಯಾಗಿದೆ. ಇದನ್ನೇ ನಮ್ಮ ಸಂವಿಧಾನವೂ ಹೇಳುತ್ತಿದೆ. ಆದ್ದರಿಂದ ಬಸವಣ್ಣರವರ ಕಾಲದ ಅನುಭವ ಮಂಟಪವೇ ಪ್ರಪಂಚದ ಮೊದಲ ಪಾರ್ಲಿಮೆಂಟ್ ಆಗಿದೆ ಎಂದು ಬಣ್ಣಿಸಿದರು.

ಜನರು ಮತ್ತು ಸಮಾಜ ಹೇಗಿರಬೇಕು, ಯಾವ ರೀತಿ ಮಾತನಾಡಬೇಕು, ಹೇಗೆ ಶಾಂತಿ ಕಾಪಾಡಿ ಕೊಳ್ಳಬೇಕೆಂದು ಬಸವಣ್ಣರವರು ಹೇಳಿದ್ದಾರೆ. ನಾವು ಯಾರ ಜೊತೆ ಒಡನಾಟ ಇಟ್ಟುಕೊಳ್ಳುತ್ತವೊ ಅದು ನಮ್ಮ ಬದುಕನ್ನು ರೂಪಿಸುತ್ತಾ ಹೋಗುತ್ತದೆ. ಮನುಷ್ಯ ಹಂಚಿ ತಿನ್ನಬೇಕೇ ಹೊರತು ಕಿತ್ತು ತಿನ್ನಬಾರದು. ಎಷ್ಟು ಓದಿದ್ದೇವೆ. ಪದವಿ ಪಡೆದಿದ್ದೇವೆ ಎಂಬುದು ಮುಖ್ಯವಲ್ಲ. ಎಷ್ಟು ಮನೆಗಳಲ್ಲಿ ನಂದಾ ದೀಪ ಬೆಳಗಿದೆ, ಎಷ್ಟು ಜನರ ಮುಖದಲ್ಲಿ ನಗು ತರಿಸಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಈಗ ಜನರು ಸಂತೋಷ, ತೃಪ್ತಿ ಇಲ್ಲ, ಸಮಾಜದಲ್ಲಿ ಸಾಮರಸ್ಯ ಇಲ್ಲ. ಇದಕ್ಕೆ ಕಾರಣ ಬೇರೆಯವರು ಸಂತೋಷವಾಗಿರುವುದರಿಂದ ನಾವುಗಳು ಸಂತೋಷವಾಗಿಲ್ಲ. ದೃಷ್ಟಿಯಿದ್ದು, ದೃಷ್ಟಿಕೋನ ಇಲ್ಲದಿದ್ದರೆ ಕುರುಡುತನಕ್ಕಿಂತ ಕೆಟ್ಟದ್ದು. ಮನುಷ್ಯನಿಗೆ ಹೃದಯ ಇದ್ದರೆ ಸಾಲದು ಹೃದಯವಂತಿಕೆ, ಮಾನವೀಯತೆ ಇರಬೇಕಾಗುತ್ತದೆ. ಜಾಣ್ಮೆ ಇದ್ದರೆ ಸಾಲದು ತಾಳ್ಮೆ ಇರಬೇಕು. ಕೌಶಲ್ಯ ಇದ್ದರೆ ಸಾಲದು ಕರುಣೆ ಇರಬೇಕಾಗುತ್ತದೆ. ಮನಸ್ಸು ವಿಚಲಿತವಾದಾಗ, ಸಂಬಂಧಗಳಲ್ಲಿ ಸಂಘರ್ಷ ಉಂಟಾದಾಗ ಶರಣರ ವಚನಗಳನ್ನು ನೆನೆದುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆರ ಎಂದು ಮಂಜುನಾಥ್ ತಿಳಿಸಿದರು.

ಬಸವಣ್ಣರ ತತ್ವಗಳು ಪ್ರಸ್ತುತ್ತವಾಗಿವೆ :

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೋರಿಸಿಕೊಟ್ಟ ಬಸವಣ್ಣರವರು ಧೀಮಂತ ದಾರ್ಶನಿಕ. ಅವರು ಪ್ರತಿಪಾದಿಸಿದ ತತ್ವಗಳು ಇಂದಿನ ಕಾಲಘಟ್ಟದಲ್ಲಿ ಪ್ರಸ್ತುತವಾಗಿವೆ. 800 ವರ್ಷಗಳ ಹಿಂದೆಯೇ ಸಮಾಜದ ಅಂಕು ಡೊಂಕುಗಳು, ಕಟ್ಟುಪಾಡುಗಳು ಹಾಗೂ ಕಂದಚಾರಗಳನ್ನು ತೊಡೆದು ಹಾಕಿ ಸಮಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಟ್ಟವರು ಎಂದು ಹೇಳಿದರು.

ಬಸವಾದಿ ಶರಣರು ಮೇಲು ಕೀಳೆಂಬ ಭಾವನೆ ಇಲ್ಲವೆಂದು ಪ್ರತಿಪಾದನೆ ಮಾಡಿದವರು. ಅಲ್ಲದೆ ತಮ್ಮ ಜೀವನದ ಉದ್ದಕ್ಕೂ ಸಮ ಸಮಾಜಕ್ಕಾಗೆ ಬೋಧನೆ ಮಾಡಿದವರು. ಶರಣ ಪರಂಪರೆಯನ್ನು ಯಾವುದೇ ಜಾಯಿ ಧರ್ಮದವರಾಗಲಿ ನಿಷ್ಕಳ್ಮಶದಿಂದ ಒಪ್ಪಿಕೊಳ್ಳುವಂತಹದಾಗಿದೆ ಎಂದು ತಿಳಿಸಿದರು.

ನಾವೆಲ್ಲರು ಆತ್ಮವಲೋಕನ ಮಾಡಿಕೊಂಡು ಬಸವಣ್ಣರವರ ತತ್ವಾದರ್ಶಗಳನ್ನುಗಳನ್ನು ಪ್ರತಿಪಾದನೆ ಮಾಡಿ ಜೀವನದಲ್ಲಿ ಅನುಸರಿಸಿದರೆ, ನಿಜವಾಗಿಯೂ ಪ್ರತಿಯೊಬ್ಬ ಮಾನವ ಶ್ರೇಷ್ಠ ಜೀವನ ನಡೆಸಲು ಸಾಧ್ಯವಾಗಲಿದೆ.

ಬಸವಣ್ಣರವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಕೆಲಸವೂ ಆಗಬೇಕಿದೆ ಎಂದು ಶೇಷಾದ್ರಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ,

ಬಸವಣ್ಣ ಎಲ್ಲರನ್ನು ಅಪ್ಪಿಕೊಂಡು ಸಂಸ್ಕಾರ ನೀಡಿದ ಸಾಕಾರ ಮೂರ್ತಿಯಾಗಿದ್ದಾರೆ. ಅವರ ತತ್ವ ಸಿದ್ಧಾಂತಗಳು ವಿಶ್ವಕ್ಕೆ ಹರಡಿವೆ. ಬಸವನ ಅಭಿಮಾನಿಗಳಾಗಿ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಬದುಕು ನಡೆಸಬೇಕಿದೆ ಎಂದು ಹೇಳಿದರು.

ವೀರಶೈವ ಮಠಗಳು ಸಮಾಜಕ್ಕೆ ಕಾರ್ಯಕ್ರಮಗಳನ್ನು ನೀಡುತ್ತಿವೆ. ಸಮಾಜಮುಖಿ ಮಠಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕಾಗಿದ್ದು, ಅದರ ಕಾರ್ಯ ಚಟುವಟಿಕೆ ಗಳಲ್ಲಿ ನಾವೂ ಭಾಗಿಯಾಗಬೇಕಿದೆ ಎಂದು ತಿಳಿಸಿದರು.

ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಶ್ರೀ ಮರಳೇ ಗವಿಮಠದ ಶ್ರೀ ಶಿವರುದ್ರಸ್ವಾಮಿ, ಶ್ರೀ ಗದ್ದಿಗೆಮಠದ ಶ್ರೀ ಮಹಾಂತ ಸ್ವಾಮಿ, ನಾಗನೂರು ರುದ್ರಾಕ್ಷಿಮಠದ ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿ, ಶ್ರೀ ವಿರಕ್ತ ಮಠದ ಶ್ರೀ ಶಿವರುದ್ರಸ್ವಾಮಿ, ಶ್ರೀ ಮಲ್ಲಿಕಾರ್ಜುನಸ್ವಾಮಿ ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿ, ದೇವಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ಗುರು ಬಸವಮಠದ ಶ್ರೀ ಬಸವಗೀತಾ ತಾಯಿ, ಮಾಜಿ ಶಾಸಕ ಎ.ಮಂಜುನಾಥ್ , ರಾ-ಚ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜಶೇಖರ್, ಎಸ್.ಆರ್.ನಾಗರಾಜು, ರಾಜ್ಯ ರೇಷ್ಮೆ ಮಹಾ ಮಂಡಳಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ, ತಾಲೂಕು ಅಧ್ಯಕ್ಷ ಡಾ.ಶಂಕರಪ್ಪ, ವೀರಶೈವ ಸಂಘ ಅಧ್ಯಕ್ಷ ಎಂ.ಆರ್.ಶಿವಕುಮಾರಸ್ವಾಮಿ, ಸಮಾಜ ಸೇವಕ ಜನತಾ ನಾಗೇಶ್ ಮತ್ತಿತರರು ಭಾಗವಹಿಸಿದ್ದರು.

ಕೋಟ್ ...

ಪ್ರಪಂಚದಲ್ಲಿರುವ ಅದ್ಬುತವಾದ ಸ್ಥಳಗಳು ಅಂದರೆ ತಂದೆಯ ಹೆಗಲು, ತಾಯಿಯ ಮಡಿಲು ಅದ್ಭುತವಾದ ಜಾಗಗಳು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ದೇವರನ್ನು ಕಾಣುತ್ತಾರೆ. ಶ್ರೀಮಂತರಿಗೆ ಭಯವೇ ದೇವರು, ಬಡವರಿಗೆ ದುಡಿಮೆಯೇ ದೇವರು, ಹಸಿದವರಿಗೆ ಅನ್ನವೇ ದೇವರು, ರೋಗಿಗಳಿಗೆ ಆರೋಗ್ಯವೇ ದೇವರು, ವೈದ್ಯರಿಗೆ ರೋಗಿಯೇ ದೇವರು, ನಿಸ್ವಾರ್ಥ ಸೇವೆ ಮಾಡುವವರಿಗೆ ಕಾಯಕವೇ ದೇವರು. ನಾನಾ ರೀತಿಯಲ್ಲಿ ದೇವರನ್ನು ಕಾಣುತ್ತೇವೆ. ದೇವರಲ್ಲಿ ಭಕ್ತಿ, ಭಯ, ನಂಬಿಕೆ ಇರಬೇಕು. ಅದು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಮನುಷ್ಯನಿಗೆ ಸಮಯ ಮತ್ತು ಸಂತೃಪ್ತಿ ನಿಜವಾದ ಸಂಪತ್ತು ಆಗಿದೆ.

- ಡಾ.ಸಿ.ಎನ್.ಮಂಜುನಾಥ್, ಸಂಸದರು.

ಕೋಟ್ ............

ಬಸವಣ್ಣ ಪವಾಡ ಪುರುಷರಲ್ಲ, ಪರಿಸ್ಥಿತಿ ಯಿಂದ ರೂಪುಗೊಂಡವರು. ಸಮಾಜದಲ್ಲಿನ ಮೇಲು ಕೀಳು, ಗಂಡು ಹೆಣ್ಣು, ವರ್ಣ ದ್ವೇಷದಂತಹ ಧೋರಣೆಗಳ ವಿರುದ್ಧ ಕ್ರಾಂತಿ ಮಾಡಿದವರು. ಬಸವಣ್ಣ ಸಮಾಜ ಸುಧಾರಕ, ಮಾನವತ ವಾದಿ, ಧರ್ಮಕ್ಕೆ ಹೊಸ ಭಾಷ್ಯ ಬರೆದವರು. ಅವರ ತತ್ವಾದರ್ಶಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ, ಸಮಾಜದ ಪರಿವರ್ತನೆಯೂ ಸಾಧ್ಯವಿದೆ.

- ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕಿರಿಯ ಶ್ರೀಗಳು, ಶ್ರೀ ಸಿದ್ಧಗಂಗಾ ಮಠ, ತುಮಕೂರು.

ಕೋಟ್ ...

ಎಲ್ಲರಲ್ಲೂ ಸಮಾನತೆ ಭಾವ ಮೂಡಬೇಕೆಂದು ಹೋರಾಟ ಮಾಡಿದ ಬಸವಣ್ಣ ಮಹಾನ್ ವ್ಯಕ್ತಿ. 12ನೇ ಶತಮಾನದಲ್ಲಿಯೇ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹೋರಾಡಿದವರು. ಚಾತುರ್ವಣದ ವಿರುದ್ಧ ಧ್ವನಿ ಎತ್ತಿದವರು. ಮನುಷ್ಯ ಅಜ್ಞಾನ ಮತ್ತು ದೌರ್ಜನ್ಯದಿಂದ ಹೊರ ಬರಲು ಅಕ್ಷರ ಜ್ಞಾನ ನೀಡಬೇಕು ಎಂದು ಪ್ರತಿಪಾದಿಸಿದವರು. ಬಸವ ತತ್ವದ ತಳಹದಿ ಮೇಲೆ ಸುಭದ್ರ, ಸಮಗ್ರ ಹಾಗೂ ಸುಭಿಕ್ಷವಾದ ಸಮಾಜ ಕಟ್ಟಲು ಸಾಧ್ಯವಿದೆ.

- ಬಸವಗೀತಾ ತಾಯಿ, ಗುರು ಬಸವಮಠ, ನಾಗನೂರು.

ಬಾಕ್ಸ್ ...

ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಸವ ಸಂಸ್ಕೃತಿ ಅಭಿಯಾನವನ್ನು ನಗರದ ಹೊರ ವಲಯದ ಅರ್ಚಕರಹಳ್ಳಿ ಬಳಿ ಬರ ಮಾಡಿಕೊಳ್ಳಲಾಯಿತು. ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಆಗಮಿಸಿದ ಅಭಿಯಾನಕ್ಕೆ ಕೆಂಪೇಗೌಡ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಾನಪದ ಕಲಾತಂಡಗಳೊಂದಿಗೆ ಆರ್ ವಿಸಿಎಸ್ ಕಲ್ಯಾಣ ಮಂಟಪದವರೆಗೆ ಮೆರವಣಿಗೆಯಲ್ಲಿ ಸಾಗಿದ ಅಭಿಯಾನದಲ್ಲಿ ಸಹಸ್ರಾರು ಜನರು ಹೆಜ್ಜೆ ಹಾಕಿದರು.

26ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಬಸವ ಜಯಂತಿ ಮತ್ತು ಬಸವ ಸಂಸ್ಕೃತಿ ಅಭಿಯಾನವನ್ನು ಶಿವ ಶರಣರು ಉದ್ಘಾಟಿಸಿದರು.

---------------------------