ಸಾರಾಂಶ
- ಬಯಲು ಅಂಗಳದಲ್ಲಿ ಮಕ್ಕಳ ಕಲಿಕೆ । ಶೌಚಾಲಯವಿಲ್ಲದೆ ಮಕ್ಕಳ ಪರದಾಟ । ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
-----ಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರರಾಜ್ಯ ಮತ್ತು ಕೇಂದ್ರ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಲು ಹಾಗೂ ಬಯಲು ಶೌಚಾಲಯ ಮುಕ್ತಗೊಳಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕುಡಿವ ನೀರು, ಶೌಚಾಲಯ, ಆಟದ ಮೈದಾನ, ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಸೌಕರ್ಯ ಇಲ್ಲದೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡುವಂತಾಗಿದೆ.
ಶಾಲೆಯ ಅವ್ಯವಸ್ಥೆ ಆಗರವಾಗಿದ್ದು, ಬಯಲು ಅಂಗಳದಲ್ಲಿ ಮಕ್ಕಳ ಕಲಿಕೆ ನಡೆಯುತ್ತಿದೆ. ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಶಿಕ್ಷಕರು ನೂತನ ಶಾಲಾ ಕಟ್ಟಡಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೆ, ಮೇಲಾಧಿಕಾರಿಗಳ ಒತ್ತಡಕ್ಕೆ ಮಣೆದು ಹಳೆ ಶಾಲಾ ಕಟ್ಟಡದಿಂದ ಹೊಸ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.ವಿಭೂತಿಹಳ್ಳಿ ಗ್ರಾಮದ ನೂತನ ಶಾಲೆಯು 2020–21ನೇ ಸಾಲಿನ ಕೆಕೆಆರ್ ಡಿಬಿಯ ಮೈಕ್ರೋ ಯೋಜನೆಯಡಿಯಲ್ಲಿ 45 ಲಕ್ಷ ರು. ಗಳ ವೆಚ್ಚದಲ್ಲಿ ಮೂರು ಕೋಣೆಗಳನ್ನು ನಿರ್ಮಿಸಲಾಗಿದೆ. ಈ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 60 ಗಂಡು,100 ಹೆಣ್ಣು ಮಕ್ಕಳು ಸೇರಿ 160 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಐವರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕನಿಷ್ಠ ಸೌಕರ್ಯಗಳು ಸಹ ಇಲ್ಲದಂತಾಗಿದೆ. ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ಬಯಲಿಗೆ ಹೋಗುವ ಅನಿವಾರ್ಯತೆಯಿದೆ. ಮಹಿಳಾ ಶಿಕ್ಷಕರಂತೂ ಪರದಾಟ ಯಮನಿಗೂ ಸಹಿಸಲು ಸಾಧ್ಯವಾಗುವುದಿಲ್ಲ. ಸುತ್ತಮುತ್ತ ಮುಳ್ಳುಕಂಠಿಗಳು ಬೆಳೆದಿವೆ. ಇದರಿಂದ ಬಹಿರ್ದೆಸೆಗೆ ಹೋಗುವಾಗ ಜೊತೆಗೊಬ್ಬರನ್ನು ಕರೆದುಕೊಂಡು ಹೋಗಲೇಬೇಕಿದೆ.ವಿಷಜಂತು ಹಾವಳಿ: ಶಾಲೆಯ ಸುತ್ತಮುತ್ತ ಮುಳ್ಳುಕಂಠಿಗಳು ಬೆಳೆದಿವೆ. ಇದರ ಮರೆಯಲ್ಲಿ ಮಕ್ಕಳು ಮೂತ್ರ ವಿಸರ್ಜನೆ ಮಾಡಿ ಬರುತ್ತಾರೆ. ಮಳೆಗಾಲವಾಗಿದ್ದರಿಂದ ವಿಷ ಜಂತುಗಳು ಬರುವ ಸಂಭವ ಹೆಚ್ಚಿದೆ. ಆದ್ದರಿಂದ, ಕೂಡಲೇ ಗ್ರಾ.ಪಂ. ನವರು ಸ್ವಚ್ಛಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ಬಿಸಿಯೂಟ ಕೊಠಡಿ: ಶಾಲೆಗೆ ಅಡಿಗೆ ಕೋಣೆ ಅರೆ ಬರೆಯಾಗಿ ನಿರ್ಮಾಣವಾಗಿದೆ. ಶಾಲೆ ಕೋಣೆಯಲ್ಲಿ ಬಿಸಿಯೂಟ ತಯಾರಿಸುವುದರಿಂದ ಏನಾದರೂ ಅನಾಹುತ ಸಂಧಸಿದರೆ ಅದಕ್ಕೆ ಹೊಣೆ ಯಾರು? ಬಾಕಿ ಇರುವ ಕೆಲಸ ಬೇಗ ಮುಗಿಸಿ ಮಕ್ಕಳ ಹಿತದೃಷ್ಟಿಯಿಂದ ಕೂಡಲೇ ಅಡಿಗೆ ಕೋಣೆಯಲ್ಲಿ ಅಡಿಗೆ ತಯಾರಿಸುವಂತೆ ಎಂದು ಗ್ರಾಮಸ್ಥರ ಆಗ್ರಹವಾಗಿದೆ.ಆಟದ ಮೈದಾನ:ಗುಡ್ಡದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಈ ಶಾಲೆಯಲ್ಲಿ ಮಕ್ಕಳು ತಂತಿ ಮೇಲೆ ನಡೆದಂತೆ ನಡೆಯಬೇಕು. ಸ್ವಲ್ಪ ಯಾಮಾರಿದರು ತಲೆ ಒಡೆಯುವುದು ಗ್ಯಾರಂಟಿ. ಇಲ್ಲಿನ ಶಿಕ್ಷಕರಿಗೆ ಮಕ್ಕಳ ಶಿಕ್ಷಣ ಕೊಡುವ ಬದಲು ಮಕ್ಕಳನ್ನು ನೋಡಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಇಲ್ಲಿ ಆಟದ ಮೈದಾನ ಇಲ್ಲದ ಪರಿಣಾಮ ಮಕ್ಕಳ ಶಿಕ್ಷಣ ನಾಲ್ಕು ಗೋಡೆಗಳ ಮಧ್ಯದ ಕೋಣೆಗೆ ಸೀಮಿತವಾಗಿದೆ.
ವಿದ್ಯುತ್ ಸಂಪರ್ಕ ಕಡಿತ: ಕಾರಣಾಂತರ ಈ ಶಾಲೆಗೆ ವಿದ್ಯುತ್ ಕಡಿತ ಮಾಡಲಾಗಿದೆ. ಇದರಿಂದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ತುಂಬಾ ತೊಂದರೆಯಾಗುತ್ತದೆ. ಶಿಕ್ಷಣ ಇಲಾಖೆಯಾಗಲಿ ಅಥವಾ ಚುನಾಯಿತ ಪ್ರತಿನಿಧಿಯಾಗಲಿ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಸಕ್ತಿ ವಹಿಸಿಲ್ಲ. ಸಚಿವ ಶರಣಬಸಪ್ಪಗೌಡ ದರ್ಶನಾಪುರವರ ತವರು ಕ್ಷೇತ್ರದ ಬಹುತೇಕ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ನರಳುತ್ತಿವೆ. ಸಚಿವರು ಇದರ ಕಡೆ ಗಮನ ಹರಿಸಬೇಕೆಂದು ಮಹಿಳಾ ಸಂಘದ ಜಿಲ್ಲಾ ಮುಖಂಡರಾದ ಭಾರತಿ ಹಿರೇಮಠ್ ಮನವಿ ಮಾಡಿದ್ದಾರೆ.------
ಕೋಟ್ -1: ವಿಭೂತಿಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರು ಶೌಚಾಲಯ ವಿದ್ಯುತ್ ಸಂಪರ್ಕ ಇಲ್ಲದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ತಕ್ಷಣ ಶಾಲೆಗೆ ಭೇಟಿ ನೀಡಿ ಪರ್ಯಾಯ ವ್ಯವಸ್ಥೆ ಮಾಡುತ್ತೇನೆ.- ಜಾಹಿದಾ ಬೇಗಂ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಹಾಪುರ.
-----ಕೋಟ್ -2 : ಈ ಶಾಲೆಯಲ್ಲಿ ಶೌಚಾಲಯ ಇಲ್ಲದೆ ಇರುವುದರಿಂದ ತುಂಬಾ ಸಮಸ್ಯೆಯಾಗಿದೆ. ಮಕ್ಕಳು ಬಯಲು ಶೌಚಾಲಯಕ್ಕೆ ಹೋಗುತ್ತಾರೆ. ಆದರೆ ನಾವು ಎಲ್ಲಿಗೆ ಹೋಗಬೇಕು. ವಿದ್ಯಾರ್ಥಿನಿಯರ, ಮಹಿಳಾ ಶಿಕ್ಷಕರ ಸಮಸ್ಯೆ ಅರಿತು ಶೌಚಾಲಯ ನಿಮಿಸಬೇಕು.
- ಹೆಸರು ಹೇಳಲು ಇಚ್ಚಿಸದ ಶಿಕ್ಷಕಿ.-----
ಕೋಟ್ -3: ಈ ಶಾಲೆಗೆ, ಕುಡಿವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಹಾಗೂ ಕಂಪೌಂಡ್, ಆಟದ ಮೈದಾನ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿ ಕೊಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡುತ್ತೇವೆ.- ಪರ್ವತ ರೆಡ್ಡಿ, ವಿಭೂತಿಹಳ್ಳಿ ಗ್ರಾಮದ ಯುವ ಮುಖಂಡ.
-----30ವೈಡಿಆರ್9: ಮೂಲಭೂತ ಸೌಕರ್ಯದಿಂದ ವಂಚಿತವಾದ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.