ಕಾಂಗ್ರೆಸ್‌ ಗ್ಯಾರಂಟಿಯಿಂದ ಜನರ ಬದುಕು ಸುಧಾರಣೆ: ರಮಾನಾಥ ರೈ

| Published : May 03 2024, 01:12 AM IST

ಸಾರಾಂಶ

ಪ್ರಸಕ್ತ ಸಾಲಿನ ಚುನಾವಣೆ ಕಾಂಗ್ರೆಸ್ ಪರವಾಗಿದೆ. ಮತದಾರರಲ್ಲಿ ಬದಲಾವಣೆ ಉತ್ಸಾಹ ಕಾಣುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.

ಶಿರಸಿ: ಕಾಂಗ್ರೆಸ್ ಗ್ಯಾರಂಟಿ ಜನರ ಕೈ ತಲುಪಿದರೆ ಮೋದಿ ಗ್ಯಾರಂಟಿ ಬಿಜೆಪಿಗರ ಬಾಯಲ್ಲಿ ಮಾತ್ರ ಹರಿದಾಡುತ್ತಿದೆ. ಇದನ್ನು ಮತದಾರರು ಗಮನಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಮೂಲಕ ಬದುಕು ಸುಧಾರಿಸುವ ಕಾರ್ಯ ಮಾಡಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಹಲವು ಭರವಸೆ ನೀಡಿ ಅವುಗಳನ್ನು ಹುಸಿಗೊಳಿಸಿದೆ. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಟೀಕೆ ಮಾಡಿರುವ ಬಿಜೆಪಿಗರು ಈಗ ಅದನ್ನೇ ಚೌರ್ಯ ಮಾಡಿ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಆದರೆ ಇವೆರಡು ಗ್ಯಾರಂಟಿಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಕಾಂಗ್ರೆಸ್ ಗ್ಯಾರಂಟಿ ಜನರಿಗೆ ಈಗಾಗಲೇ ತಲುಪಿದೆ. ಮೋದಿ ಗ್ಯಾರಂಟಿ ಇನ್ನೂ ಘೋಷಣೆಯ ಹಂತದಲ್ಲೇ ಇದೆ ಎಂದರು.

ಪ್ರಸಕ್ತ ಸಾಲಿನ ಚುನಾವಣೆ ಕಾಂಗ್ರೆಸ್ ಪರವಾಗಿದೆ. ಮತದಾರರಲ್ಲಿ ಬದಲಾವಣೆ ಉತ್ಸಾಹ ಕಾಣುತ್ತಿದೆ. ಶಕ್ತಿಯಿಂದ ಮಹಿಳೆಯರು, ಯುವನಿಧಿಯಿಂದ ಯುವಕರು, ಗೃಹಲಕ್ಷ್ಮಿಯಿಂದ ಗೃಹಿಣಿಯರು, ಗೃಹಜ್ಯೋತಿಯಿಂದ ಪುರುಷರು, ಅನ್ನಭಾಗ್ಯದಿಂದ ಎಲ್ಲರೂ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದಾರೆ ಎಂದ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಗೆಲುವು ಈಗಾಗಲೇ ನಿಶ್ಚಿತವಾಗಿದೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ರವೀಂದ್ರ ನಾಯ್ಕ, ಎಸ್.ಕೆ. ಭಾಗವತ, ಜಗದೀಶ ಗೌಡ, ಅಶ್ರಫ್, ನವೀನ್ ಡಿಸೋಜಾ, ಸಂತೋಷ ಶೆಟ್ಟಿ ಇತರರಿದ್ದರು.