ಶಿಕ್ಷಣದಿಂದ ಸಮಾಜದ ಸುಧಾರಣೆ

| Published : Apr 30 2025, 12:32 AM IST

ಸಾರಾಂಶ

ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರಕಿದೆ. ದೇಶದ ಜನತೆಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಿದೆ. ಅವರ ಆಶಯದಂತೆ ಶಿಕ್ಷಣ, ಹೋರಾಟ, ಸಂಘಟನೆಗೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರವೇ ಸಮಾಜ ಸುಧಾರಣೆ ಸಾಧ್ಯವಿದೆ.

ಕೊಪ್ಪಳ(ಯಲಬುರ್ಗಾ):

ಶಿಕ್ಷಣ, ಸಮಾನತೆ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಾಗಿವೆ. ಅವುಗಳಿಂದ ಯಾರೂ ವಂಚಿತವಾಗಬಾರದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ನೀಡಿದರು ಎಂದು ಯುವ ಮುಖಂಡ ಈಶ್ವರ ಅಟಮಾಳಗಿ ಹೇಳಿದರು.

ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಮಂಗಳವಾರ ಜರುಗಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಜಯಂತಿ ನಿಮಿತ್ತ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರಕಿದೆ. ದೇಶದ ಜನತೆಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಿದೆ. ಅವರ ಆಶಯದಂತೆ ಶಿಕ್ಷಣ, ಹೋರಾಟ, ಸಂಘಟನೆಗೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರವೇ ಸಮಾಜ ಸುಧಾರಣೆ ಸಾಧ್ಯವಿದೆ ಎಂದ ಅವರು, ಆ ನಿಟ್ಟಿನಲ್ಲಿ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಹೆಚ್ಚು ಕಾಳಜಿ ವಹಿಸಬೇಕು, ಸರ್ಕಾರ ನಾನಾ ಯೋಜನೆ ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಗ್ರಾಪಂ ಅಧ್ಯಕ್ಷ ಈಶಪ್ಪ ಕೊಳೂರು ಹಾಗೂ ದಲಿತ ಮುಖಂಡ ಶರಣಪ್ಪ ಕಟ್ಟೆಪ್ಪನವರ ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್‌ ಜಯಂತಿ ನಿಮಿತ್ತ ಗ್ರಾಮದಲ್ಲಿ ಅದ್ಧೂರಿಯಾಗಿ ಭಾವಚಿತ್ರದ ಮೆರವಣಿಗೆ ನಡೆಯಿತು. ಬಳಿಕ ಅವರ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರಮುಖರಾದ ಅಡಿವೆಪ್ಪ ಲಕ್ಕಲಕಟ್ಟಿ, ಶೇಖರ ಗುರಾಣಿ, ಕುಮಾರ ಗಡಾದ, ದುರಗಪ್ಪ ನಡುಲಕೇರಿ, ಶಿವಪ್ಪ ಗದ್ದಿ, ವಿಜಯಕುಮಾರ ಕವಲೂರು, ಮೇಘರಾಜ ಗದ್ದಿ, ಹನುಮಂತಪ್ಪ ನಡಲುಕೇರಿ, ಬಾಲಪ್ಪ ವಾಲ್ಮೀಕಿ ಇದ್ದರು.