ಕ್ರೀಡೆಯಿಂದ ಆರೋಗ್ಯ ವೃದ್ಧಿ: ಜಿಲ್ಲಾಧಿಕಾರಿ ದಿವಾಕರ

| Published : Apr 16 2025, 12:40 AM IST

ಸಾರಾಂಶ

ಕ್ರೀಡೆ ಆರೋಗ್ಯ ವೃದ್ಧಿಗೊಳಿಸುವುದರ ಜೊತೆಗೆ ಮನಸ್ಸನ್ನು ಉಲ್ಲಸಿತಗೊಳಿಸಲು ಸಹಕಾರಿಯಾಗಿದೆ.

ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕ್ರೀಡೆ ಆರೋಗ್ಯ ವೃದ್ಧಿಗೊಳಿಸುವುದರ ಜೊತೆಗೆ ಮನಸ್ಸನ್ನು ಉಲ್ಲಸಿತಗೊಳಿಸಲು ಸಹಕಾರಿಯಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.

ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸರ್ಕಾರಿ ನೌಕರರ ವಿಜಯನಗರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದರು.

ಜಿಲ್ಲೆಯ ಎಲ್ಲ ನೌಕರರು ಒಂದೇ ಕಡೆ ಸೇರುವ ಅವಕಾಶವಾಗಿದೆ. ಮನುಷ್ಯ ಆರೋಗ್ಯವಾಗಿರಲು ಯೋಗ, ವಾಕಿಂಗ್ ಜತೆಗೆ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ಎಲ್ಲರೂ ಗ್ರಾಮೀಣ ಭಾಗದಿಂದ ಬಂದವರೆ ಹೆಚ್ಚಾಗಿದ್ದೀರಿ. ನಿಮ್ಮ ಪ್ರತಿಭೆಯನ್ನು ತೋರಿಸಲು ಇದೊಂದು ಸುವರ್ಣ ಅವಕಾಶ. ಆಟವನ್ನು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು. ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಕ್ರೀಡೆ ಅಗತ್ಯ ಎಂದರು.

ಜಿಪಂ ಸಿಇಒ ಅಕ್ರಂ ಷಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗ್ರೇಸಿ, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಜಿ.ಮಲ್ಲಿಕಾರ್ಜುನಗೌಡ, ಪದಾಧಿಕಾರಿಗಳಾದ ರಾಘವೇಂದ್ರ ಎಸ್. ಹೆಗಡಿಯಾಳ್, ಕೆ.ಮಲ್ಲೇಶಪ್ಪ, ಟಿ.ಪಂಪಣ್ಣ, ಎಂ.ಪಿ.ಎಂ. ಮಂಜುನಾಥ, ಕೆ.ಅಯ್ಯನಗೌಡ, ಎಸ್.ವೆಂಕಟೇಶ್, ಯೋಗೇಶ್ವರ, ಎನ್.ಜಿ.ಮನೋಹರ್ ಇತರರಿದ್ದರು.