ಪಂಚ ಗ್ಯಾರಂಟಿಗಳಿಂದ ಬಡವರ ಜೀವನ ಸುಧಾರಣೆ

| Published : Mar 12 2024, 02:09 AM IST

ಸಾರಾಂಶ

ವಿಜಯಪುರ: ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದು ತೋರಿಸಿದೆ ಎಂದು ಪುರಸಭಾ ಸದಸ್ಯ ಎಂ ಸತೀಶ್ ಕುಮಾರ್ ಹೇಳಿದರು.

ವಿಜಯಪುರ: ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದು ತೋರಿಸಿದೆ ಎಂದು ಪುರಸಭಾ ಸದಸ್ಯ ಎಂ ಸತೀಶ್ ಕುಮಾರ್ ಹೇಳಿದರು.

ಆಲೂರು ದುದ್ದನಹಳ್ಳಿ ಬಳಿ ಏರ್ಪಡಿಸಿದ್ದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶಕ್ಕೆ ತೆರಳಿದ ಕಾರ್ಯಕರ್ತರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಂತೆ ಪ್ರತಿ ಕುಟುಂಬದ ಮುಖ್ಯಸ್ಥರಿಗೆ 2 ಸಾವಿರ ಹಣ, ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ೫ ಕೆಜಿ ಜೊತೆಗೆ ಹೆಚ್ಚುವರಿ ೫ ಕೆಜಿ ಅಕ್ಕಿಗೆ ಹಣ, ಉಚಿತ ವಿದ್ಯುತ್ ಹಾಗೂ ನಿರುದ್ಯೋಗ ಯುವಕರಿಗೆ ಪಿಂಚಣಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿದೆ. ರಾಜ್ಯದ ಜನರ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಂಡಿರುವ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಹೇಳಿದರು.

ಪುರಸಭಾ ಸದಸ್ಯ ವಿ.ನಂದಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನರಿಗೆ ಉಪಯೋಗವಾಗಲೆಂದು ಉಚಿತ ಯೋಜನೆಗಳನ್ನು ನೀಡುತ್ತಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರದ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸದೆ ಅಧಿಕಾರ ದಾಹದಿಂದ ಜನರನ್ನು ಕಡೆಗಣಿಸಿದ್ದಕ್ಕೆ ಜನ ತಕ್ಕ ಪಾಠ ಕಲಿಸಿದರು ಎಂದರು.

ಈ ವೇಳೆ ಪುರಸಭಾ ಮಾಜಿ ಸದಸ್ಯರಾದ ಸಂಪತ್ ಕುಮಾರ್, ಮುನಿಚಿನ್ನಪ್ಪ, ನಂದಕುಮಾರ್, ಕಾಂಗ್ರೆಸ್ ಮುಖಂಡರಾದ ಮರವೆ ಕೆಂಪಣ್ಣ, ಕೆ.ಎಂ.ಮಧು, ಹರೀಶ್, ಸೈಫುಲ್ಲಾ, ಭದ್ರಣ್ಣ, ಬಾಬು, ವಿನಯ್, ಹನುಮಂತಪ್ಪ, ವೀರಣ್ಣ ಇತರರಿದ್ದರು.