5 ವರ್ಷದಲ್ಲಿ ಭಾರತ ವಿಶ್ವದ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ

| Published : May 26 2024, 01:38 AM IST

5 ವರ್ಷದಲ್ಲಿ ಭಾರತ ವಿಶ್ವದ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

‘ಸೃಷ್ಟಿ-2024’ ಇನ್ನೊವೇಟಿವ್‌ ಎಕ್ಸ್‌ಚೆಂಜ್ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂದಿನ ಐದು ವರ್ಷಗಳಲ್ಲಿ ಪ್ರಪಂಚದಲ್ಲಿಯೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿ ಭಾರತ ಮುನ್ನುಗ್ಗಲಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಉಪ ಕುಲಪತಿ ಡಾ। ಎಸ್.ವಿದ್ಯಾಶಂಕರ್‌ ಹೇಳಿದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿಎಸ್‌ಎಸ್ ಟ್ರಸ್ಟ್, ಯುವಕ ಸಂಘ ಹಾಗೂ ಹೆಬ್ಬಾಳದ ಏಟ್ರಿಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಎಐಟಿ) ಸಹಯೋಗದಲ್ಲಿ ಶುಕ್ರವಾರ ನಡೆದ ‘ಸೃಷ್ಟಿ-2024’ ಇನ್ನೊವೇಟಿವ್‌ ಎಕ್ಸ್‌ಚೆಂಜ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿಗೆ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿದ್ದು, ಪ್ರಪಂಚದ ಬಲಿಷ್ಠ ದೇಶಗಳಲ್ಲಿ ಒಂದಾಗಲಿದೆ ಎಂದರು.

ಭಾರತದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಾಕಷ್ಟಿವೆ. ಅತ್ಯುತ್ತಮ ಶಿಕ್ಷಣವೂ ಇದೆ. ಯುವ ಎಂಜಿನಿಯರ್‌ಗಳು ಗಣಕಯಂತ್ರ, ಅಂತರ್ಜಾಲ ಮತ್ತು ಕೃತಕ ಬುದ್ಧಿಮತ್ತೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸಂಶೋಧನೆ, ಯೋಜನೆಗಳನ್ನು ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.

ಎಐಟಿ ಮುಖ್ಯಸ್ಥ ಸಿ.ಎಸ್‌.ಸುಂದರ್‌ ರಾಜು ಮಾತನಾಡಿ, ರಾಜ್ಯದ ಬಹುತೇಕ ಎಲ್ಲ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಸೃಷ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಸುಮಾರು 300 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಗುವುದು. ಅಲ್ಲದೇ, 48 ಗಂಟೆಗಳ ಹ್ಯಾಕಥಾನ್‌ ಕೂಡ ಇರಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತಿಮವಾಗಿ ಆಯ್ಕೆಯಾಗುವ ವಿದ್ಯಾರ್ಥಿಗಳು ಹಾಗೂ ತಂಡಗಳಿಗೆ ₹25 ಲಕ್ಷದವರೆಗೆ ಬಹುಮಾನ ವಿತರಿಸಲಾಗುವುದು ಎಂದರು.

ಯುಜಿಸಿ ಉಪಾಧ್ಯಕ್ಷ ಪ್ರೊ. ದೀಪಕ್‌ ಕುಮಾರ್ ಶ್ರೀವಾತ್ಸವ್‌, ಮರ್ಸಿಡಿಸ್‌ ಬೆಂಜ್‌ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕ ಮನು ಸಾಳೆ, ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಶ್‌ ಚೌಹ್ವಾನ್‌ ಉಪಸ್ಥಿತರಿದ್ದರು.