ಒತ್ತಡದ ಬದುಕಿನಲ್ಲಿ ಸಂಬಂಧಗಳನ್ನು ದೂರ ಮಾಡುತ್ತಿದ್ದೇವೆ-ನಾಲ್ವಡಿ ಶಾಂತಲಿಂಗ ಶ್ರೀಗಳು

| Published : Nov 14 2024, 12:55 AM IST

ಒತ್ತಡದ ಬದುಕಿನಲ್ಲಿ ಸಂಬಂಧಗಳನ್ನು ದೂರ ಮಾಡುತ್ತಿದ್ದೇವೆ-ನಾಲ್ವಡಿ ಶಾಂತಲಿಂಗ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

‘ಪರೋಕರಾಂ ಇದಂ ಶರೀರಂ’ ಆದರೆ ಒತ್ತಡದ ಬದುಕಿನಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ಸಂಬಂಧಗಳನ್ನು ದೂರ ಮಾಡುತ್ತಿದ್ದೇವೆ. ನಮ್ಮ ಕೈಲಾದಷ್ಟು ಇತರರಿಗೆ ಉಪಕಾರ ಮಾಡಿ, ಮಣ್ಣಿನಲ್ಲಿ ಸೇರುವ ಮುನ್ನವೇ ಮಣ್ಣಿನ ಋಣ ತೀರಿಸುವಂತಹ ಸತ್ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕಣ್ವಕುಪ್ಪಿಯ ಮಠದ ನಾಲ್ವಡಿ ಶಾಂತಲಿಂಗ ಶ್ರೀಗಳು ಕರೆ ನೀಡಿದರು.

ಬ್ಯಾಡಗಿ: ‘ಪರೋಕರಾಂ ಇದಂ ಶರೀರಂ’ ಆದರೆ ಒತ್ತಡದ ಬದುಕಿನಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ಸಂಬಂಧಗಳನ್ನು ದೂರ ಮಾಡುತ್ತಿದ್ದೇವೆ. ನಮ್ಮ ಕೈಲಾದಷ್ಟು ಇತರರಿಗೆ ಉಪಕಾರ ಮಾಡಿ, ಮಣ್ಣಿನಲ್ಲಿ ಸೇರುವ ಮುನ್ನವೇ ಮಣ್ಣಿನ ಋಣ ತೀರಿಸುವಂತಹ ಸತ್ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕಣ್ವಕುಪ್ಪಿಯ ಮಠದ ನಾಲ್ವಡಿ ಶಾಂತಲಿಂಗ ಶ್ರೀಗಳು ಕರೆ ನೀಡಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಕೊಪ್ಪಳ ಮಠದ ಗವಿಸಿದ್ಧೇಶ್ವರ ಮಹಾ ಸ್ವಾಮಿಗಳ ಪ್ರವಚನ ಕಾರ‍್ಯಕ್ರಮಕ್ಕೆ ಎಲ್ಲ ಶ್ರೀಗಳೊಂದಿಗೆ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಶರಣರು ಆಧ್ಯಾತ್ಮದ ಮೂಲಕ ತಮ್ಮ ಪ್ರವಚನಗಳ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಬದುಕು ಸಾರ್ಥಕ ಎಂದು ಮನುಷ್ಯ ಜೀವನದಲ್ಲಿ ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳನ್ನು ಮರು ಸ್ಥಾಪಿಸುವ ಕೆಲಸಗಳನ್ನು ಶರಣರು, ಸಂತರು ಮಠ ಮಾನ್ಯಗಳು ನಿರಂತರ ವಾಗಿ ಮಾಡುತ್ತ ಬಂದಿದ್ದು ಅವುಗಳಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಠ ಸಹ ಒಂದಾಗಿದೆ ಎಂದರು. ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯಶ್ರೀಗಳು ಮಾತನಾಡಿ, ನುಡಿದಂತೆ ನಡೆಯುವುದು ಶರಣರ ಮೊದಲ ಜವಾಬ್ದಾರಿಯಾಗಬೇಕು, ಸಮಾಜದಲ್ಲಿ ಪರಿವರ್ತನೆ ತರಬೇಕಾದಲ್ಲಿ ಶರಣರು ಮೊದಲು ಸ್ವಚಾರಿತ್ರ್ಯ ಜೀವನ ನಡೆಸುವುದು ಅತ್ಯವಶ್ಯ ಅಂದಾಗ ಮಾತ್ರ ಅವರು ಇತರರಿಗೆ ಮಾದರಿಯಾಗಲಿದ್ದಾರೆ, ಬಡವರು ದೀನ, ದಲಿತರು ಸೇರಿದಂತೆ ಯಾವುದೇ ಜಾತಿ ಬೇಧವಿಲ್ಲದೇ ತ್ರಿವಿಧ ದಾಸೋಹ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ, ಪ್ರೀತಿ, ವೈಚಾರಿಕತೆ ಹಾಗೂ ಮಾನವೀಯ ಮೌಲ್ಯ ಉಳಿಸುವ ಕರ‍್ಯದಲ್ಲಿ ಶ್ರೀಗಳು ತೊಡಗಿದ್ದಾರೆ ಎಂದರು. ನೆಗಳೂರಿನ ಶಾಂತವೀರ ಶಿವಾಚಾರ್ಯಶ್ರೀಗಳು ಮಾತನಾಡಿ, ಸರಳತೆ ಎಂಬುದಕ್ಕೆ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ಜೀವಂತ ಸಾಕ್ಷಿ ಎಂಬುದು ಜಗಜ್ಜಾಹೀರವಾಗಿದೆ, ಬದುಕಿನಲ್ಲಿ ಪ್ರತಿಯೊಬ್ಬರು ಎದುರಿಸುವ ಪ್ರಶ್ನೆಗಳು ಹಾಗೂ ಹಲವಾರು ದುಖಃ ದುಮ್ಮಾನಗಳನ್ನು ಪರಿಹರಿಸುವ ಕೆಲಸವನ್ನು ಕೊಪ್ಪಳದ ಶ್ರೀಗಳು ನಿರಂತವಾಗಿ ಮಾಡುತ್ತ ಬಂದಿದ್ದಾರೆ, ಅವರ ಪ್ರವಚನ 12 ದಿನಗಳ ಕಾಲ ಹಾವೇರಿ ಜಿಲ್ಲೆಯ ಜನರಿಗೆ ದೊರೆಯುತ್ತಿರುವುದು ಖುಷಿಯ ವಿಚಾರ ಎಂದರು. ಕೂಡಲ ಗುರುನಂಜೇಶ್ವರಮಠದ ಗುರುದೇವರು ಶ್ರೀಗಳು ಮಾತನಾಡಿ, ಇತ್ತೀಚೆಗೆ ಹೆತ್ತವರನ್ನ ವೃದ್ಧಾಶ್ರಮಕ್ಕೆ ತಳ್ಳಿ ಮನೆಯಲ್ಲಿ ತಾಯಿ ಬದಲಾಗಿ ನಾಯಿಗಳನ್ನು ಸಾಕುವ ಜನರೇ ಹೆಚ್ಚಾಗಿದ್ದಾರೆ. ಇದು ಜನತೆ ಸಂಸ್ಕಾರ ಹೀನರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದನ್ನೆಲ್ಲ ಅವಲೋಕಿಸಿದರೆ ನಾವೆಲ್ಲಾ ಅದ್ಯಾವ ಮುಂದುವರೆದ ನಾಗರೀಕತೆಯಲ್ಲಿ ಬದುಕುತ್ತಿದ್ದೇವೆ ಎಂಬುದರ ಸ್ಪಷ್ಟ ಅರಿವಾಗುತ್ತದೆ ಎಂದರು. ಬ್ಯಾಡಗಿ ಮುಪ್ಪಿನೇಶ್ವರ ಮಠದ ಚೆನ್ನಮಲ್ಲಿಕಾರ್ಜುನಶ್ರೀಗಳು ಮಾತನಾಡಿ, ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯವನ್ನು ಮಠ ಮಾನ್ಯಗಳು ಶರಣರು ಮಾಡುತ್ತ ಬಂದಿದ್ದಾರೆ, ಅನ್ನ, ಅಕ್ಷರ ಜ್ಞಾನವನ್ನ ಉಣ ಬಡಿಸುತ್ತ ದೇಶದ ಪರಂಪರೆ ಸಂಸ್ಕೃತಿಯನ್ನ ಎಲ್ಲರಲ್ಲಿ ಬೆಳೆಸುವ ಕಾರ‍್ಯಕ್ಕೆ ಮುಂದಾಗಿವೆ ಎಂದರು.ಲಿಂಗನಾಯಕನಹಳ್ಳಿಯ ಚನ್ನವೀರಶ್ರೀಗಳು ಮಾತನಾಡಿ, ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಮೊದಲು ಮನೆಯಲ್ಲಿ ಸಂಸ್ಕಾರ ಕೊಡಿ, ಇದರಿಂದ ದೇಶಕ್ಕೆ ಅನರ್ಘ್ಯ ರತ್ನಗಳನ್ನು ಕೊಡುಗೆ ನೀಡಿದಂತಾಗುತ್ತದೆ, ನಮ್ಮೋಳಗೆ ತುಂಬಿರುವ ಅಪರಿಮಿತ ಅಜ್ಞಾನವನ್ನು ತೆಗೆದು ಹಾಕಲು ಗವಿಸಿದ್ದೇಶ್ವರ ಶ್ರೀಗಳ ಪ್ರವಚನ ಸಹಕಾರಿಯಾಗಲಿದೆ ಎಂದರು. ಕಾರ‍್ಯಕ್ರಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರಶ್ರೀಗಳು ಸೇರಿದಂತೆ ಹೂವಿನಹಡಗಲಿಯ ಡಾ. ಹಿರಿಶಾಂತವೀರ ಸ್ವಾಮಿಗಳು, ತಿಪ್ಪಾಯಿಕೊಪ್ಪದ ಮಹಾಂತ ಮಹಾಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಶ್ರೀಗಳು ಹಾಗೂ ಸುಕ್ಷೇತ್ರ ಬಳಗಾನೂರಿನ ಶಿವ ಶಾಂತವೀರ ಶರಣರು ಹಾಗೂ ಇನ್ನಿತರು ಭಾಗವಹಿಸಿದ್ದರು.ಬಾಕ್ಸ್:

ಆರಂಭದ ದಿನವಾದ ಕಾರ್ಯಕ್ರಮದಲ್ಲಿ ಮಹಿಳೆಯರು, ಯುವಕರು, ವಯೋವೃದ್ಧರು ಸೇರಿದಂತೆ 5 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ಕಾರ‍್ಯಕ್ರಮ ಯಶಸ್ವಿಗೊಳಿಸಿದರು.ಪೋಟೋ-13ಬಿವೈಡಿ6ಏ-ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪ್ರವಚನ ಕಾರ‍್ಯಕ್ರಮವನ್ನು ವಿವಿಧ ಮಠಾಧೀಶರು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು.

ಪೋಟೋ-13ಬಿವೈಡಿ6ಬಿ-ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪ್ರವಚನ ಕಾರ‍್ಯಕ್ರಮದಲ್ಲಿ ಸೇರಿರುವ ಜನಸ್ತೋಮ.