ಸಾರಾಂಶ
ಬುದ್ಧ, ಏಸು, ಗಾಂಧಿ, ಅಬ್ದುಲ್ ಕಲಾಂ, ವಿವೇಕಾನಂದ ಮೊದಲಾದವರೆಲ್ಲರೂ ಪೂರ್ವದಲ್ಲಿ ಇದ್ದ ರೀತಿಯೇ ಬೇರೆ, ಆ ನಂತರದಲ್ಲಿ ಬದುಕಿದ ರೀತಿಯೇ ಬೇರೆ. ಮಾತು ಹಿತ ಮತ್ತು ಮಿತವಾಗಿದ್ದರೆ ಬದುಕಿನಲ್ಲಿ ಘರ್ಷಣೆಯೇ ಇರುವುದಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿನಿಯರಿಗೆ ಸಂಯಮದ ಜೊತೆಗೆ ಓದಿನಲ್ಲಿ ಜಾಣ್ಮೆ ಇರಬೇಕು ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ತಿಳಿಸಿದರು.ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಎ ಮತ್ತು ಪ್ರಥಮ ಬಿ.ಕಾಂ. ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿ ಎಂದರೆ ನೆನಪು, ವಿನ್ಯಾಸ ಎಂದರೆ ರೂಪ ಎಂದರ್ಥ. ಅಭಿವಿನ್ಯಾಸವೆಂದರೆ ನೆನಪಿಗೆ ಒಂದು ಅಚ್ಚುಕಟ್ಟಾದ ರೂಪವನ್ನು ನೀಡುವುದೇ ಆಗಿದೆ. ಕ್ರಿಯಾಶೀಲತೆಯು ವಿದ್ಯಾರ್ಥಿನಿಯರ ಯಶಸ್ಸಿನ ಹಾದಿಯಾಗಿರುತ್ತದೆ ಎಂದರು.
ಕಾವ್ಯ ಮೀಮಾಂಸಕನಾದ ಆನಂದವರ್ಧನನು, ನವ ನವುನ್ನೇವು ಶಾಲಿನಿ ಪ್ರತಿಭಾ ಮಾತ ಎಂದಿದ್ದಾನೆ. ಜ್ಞಾನದ ಬಲದಿಂದ ಅಜ್ಞಾನದ ಕತ್ತಲನ್ನು ಹೋಗಲಾಡಿಸಲು ಸಾಧ್ಯ ಎಂದು ಬಸವಣ್ಣನವರು ತಿಳಿಸಿದ್ದಾರೆ. ಒಬ್ಬ ಮಹಿಳೆ ಸ್ವತಂತ್ರವಾಗಿ ಮುಕ್ತವಾಗಿ ಮಾತನಾಡುವ ಶಕ್ತಿ ಹೊಂದಿದ್ದರೆ ಮಾತ್ರ ಆಕೆ 1000 ಪುರಷರಿಗೆ ಸಮಾನ ಎಂಬ ಗಾದೆ ಮಾತನ್ನು ಅವರು ಸ್ಮರಿಸಿದರು.ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ ಮಾತನಾಡಿ, ಬುದ್ಧ, ಏಸು, ಗಾಂಧಿ, ಅಬ್ದುಲ್ ಕಲಾಂ, ವಿವೇಕಾನಂದ ಮೊದಲಾದವರೆಲ್ಲರೂ ಪೂರ್ವದಲ್ಲಿ ಇದ್ದ ರೀತಿಯೇ ಬೇರೆ, ಆ ನಂತರದಲ್ಲಿ ಬದುಕಿದ ರೀತಿಯೇ ಬೇರೆ. ಮಾತು ಹಿತ ಮತ್ತು ಮಿತವಾಗಿದ್ದರೆ ಬದುಕಿನಲ್ಲಿ ಘರ್ಷಣೆಯೇ ಇರುವುದಿಲ್ಲ. ಕಾಲ ಅಥವಾ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದರಿಂದ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎನ್. ಸೂರಜ್ ಇದ್ದರು. ನಂದಿನಿ ಮತ್ತು ತಂಡ ಪ್ರಾರ್ಥಿಸಿದರು. ಪನ್ನಘ ಸ್ವಾಗತಿಸಿದರು. ಅನುಷಾ ನಿರೂಪಿಸಿದರು. ಜಯಶ್ರೀ ವಂದಿಸಿದರು.