ಸಾರಾಂಶ
- ಜಿ.ಪಂ.ನಲ್ಲಿ ನೀರು-ನೈರ್ಮಲ್ಯ ಸಮಿತಿ ಸಭೆಯಲ್ಲಿ ಸಿಇಒ ಸುರೇಶ ಇಟ್ನಾಳ್ ಮಾಹಿತಿ - - -
ಕನ್ನಡಪ್ರಭ ವಾರ್ತೆ, ದಾವಣಗೆರೆಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಿರಿಯ ಎಂಜಿನಿಯರ್‌ಗಳ ಜವಾಬ್ದಾರಿಯಾಗಿದೆ. ಕಲುಷಿತ ನೀರು ಪೂರೈಕೆಯಾದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು.
ಗುರುವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 4ನೇ ಹಂತದ ಕಾಮಗಾರಿಗಳು ನಡೆಯುತ್ತಿವೆ. ಮನೆ ಮನೆಗೂ ನಲ್ಲಿ ಅಳವಡಿಸುವ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಗ್ರಾಮಗಳಲ್ಲಿ ಪೈಪ್ ಅಳವಡಿಸಲಾಗಿದ್ದು, ಮನೆ ಮನೆಗೆ ನಲ್ಲಿ ಸಂಪರ್ಕಕ್ಕೆ ಸಿವಿಪಿವಿಸಿ ಪೈಪ್ ಅಳವಡಿಕೆಗೆ, ಸಿಸಿ ರಸ್ತೆ ಕಟ್ಟಿಂಗ್ ಮತ್ತು ಕೊಳವೆಬಾವಿಯಿಂದ ನೀರಿನ ಪೈಪ್‌ಲೈನ್ ಅಳವಡಿಕೆ ಮಾಡಲು 8 ಕಾಮಗಾರಿಗಳಿಗೆ ಸಮಿತಿ ಅನುಮೋದನೆ ನೀಡಿದೆ ಎಂದರು.ಸಮಿತಿಯ ಮುಂದೆ 13 ಗ್ರಾಮಗಳಲ್ಲಿ ಸಿಸಿ ರಸ್ತೆ ಕಟಿಂಗ್ ಮಾಡಿ ನಲ್ಲಿ ಅಳವಡಿಕೆ, ಪೈಪ್‌ಲೈನ್ ಅಳವಡಿಕೆ, ಓವರ್‌ಹೆಡ್ ಟ್ಯಾಂಕ್‌ಗಳ ದುರಸ್ತಿ ಕಾಮಗಾರಿಗೆ ಅನುಮೋದನೆ ನೀಡಲು ಪರಿಶೀಲಿಸಲಾಯಿತು. ಕೆಲವು ಕಾಮಗಾರಿಗಳು ಯೋಜಿತ ಕಾಮಗಾರಿಗಿಂತ ಅಂದಾಜು ಮೊತ್ತ ಹೆಚ್ಚಿದ್ದು ಸ್ಥಳ ಮಹಜರು ಮಾಡಿದ ನಂತರ ಅನುಮೋದನೆ ನೀಡಲು ಸಮಿತಿ ತೀರ್ಮಾನಿಸಿತು.
ಅನುಮೋದಿತ ಕಾಮಗಾರಿಗಳಲ್ಲಿ ನಲ್ಲಿ ಅಳವಡಿಕೆ, ವಿತರಣಾ ಪೈಪ್, ಟ್ಯಾಂಕ್ ರಿಪೇರಿ ಕೈಗೊಳ್ಳಲಾಗುತ್ತದೆ. ಅನುಮೋದನೆ ನೀಡಿದ ಗ್ರಾಮಗಳ ವಿವರ; ಹೆಬ್ಬಾಳ, ಕಾಟೀಹಳ್ಳಿ, ನೀರ್ಥಡಿ ದ್ಯಾಮೇನಹಳ್ಳಿ, ಶ್ರೀರಾಮನಗರ ಆಲೂರಟ್ಟಿ, ಸಿದ್ದನೂರು, ಕೆರೆಯಾಗಲಹಳ್ಳಿ, ಅವರಗೊಳ್ಳ ಈ ಗ್ರಾಮಗಳ ಕಾಮಗಾರಿಗೆ ಅನುಮೋದನೆ ನೀಡಿ ಬೇತೂರು, ಗುಮ್ಮನೂರು ಕದರಪ್ಪನಹಟ್ಟಿ, ಗೊಲ್ಲರಹಳ್ಳಿ, ಹೊನ್ನೂರು, ಕಕ್ಕರಗೊಳ್ಳ ಆಂಜಿನೇಯ ಬಡಾವಣೆ ಇಲ್ಲಿನ ಕಾಮಗಾರಿಗೆ ಸ್ಥಳ ಪರಿಶೀಲನೆ ಮಾಡಿ ಅನುಮೋದನೆ ನೀಡಲು ತೀರ್ಮಾನಿಸಲಾಯಿತು.ಕುಡಿಯುವ ನೀರಿನ ಪರೀಕ್ಷೆ ಆಂದೋಲನಕ್ಕೆ ಸೂಚನೆ:
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಪೂರೈಸುವ ಕುಡಿಯುವ ನೀರನ್ನು ಎಲ್ಲ ಹಂತಗಳಲ್ಲಿ ಪರೀಕ್ಷೆ ಕೈಗೊಳ್ಳಬೇಕಾಗಿದೆ. ಇದೊಂದು ಆಂದೋಲನ ರೀತಿಯಲ್ಲಿ ಪಿಡಿಒಗಳು ಹಾಗೂ ಗ್ರಾಮೀಣ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಮಾಡಬೇಕಾಗಿದೆ. ಕುಡಿಯುವ ನೀರಿನ ಪರೀಕ್ಷೆಗಾಗಿ ದಾವಣಗೆರೆ ಮತ್ತು ಚನ್ನಗಿರಿಯಲ್ಲಿ ಪ್ರಯೋಗಾಲಯಗಳಿವೆ. ಇಲ್ಲಿಗೆ ನೀರಿನ ಮಾದರಿಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಬೇಕು. ನೀರಿನ ಮೂಲ, ಪೈಪ್‌ಲೈನ್, ಟ್ಯಾಂಕ್‌ಗಳಲ್ಲಿನ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕಾಗಿದೆ ಎಂದರು.ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಮುಂದಿನ ದಿನಗಳಲ್ಲಿ ಸತತವಾಗಿ ಒಂದು ವಾರ ಕಾಲ ಸಮಗ್ರವಾಗಿ ಪರಿಶೀಲನೆ ಮಾಡಿ ಪರೀಕ್ಷೆಗೆ ಒಳಪಡಿಸುವುದು, ಟ್ಯಾಂಕ್ ಸ್ವಚ್ಛ ಮಾಡಿ ಕ್ಲೋರಿನೇಷನ್ ಮಾಡಬೇಕು. ಕಲುಷಿತ ನೀರು ಮಿಶ್ರಣ ಆಗದಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಹಿರಿಯ ಭೂ ವಿಜ್ಞಾನಿ ಬಸವರಾಜು, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯ ಹಾಗೂ ಕಾರ್ಯಪಾಲಕ ಎಂಜಿನಿಯರ್ ಸೋಮ್ಲ ನಾಯ್ಕ್ ಉಪಸ್ಥಿತರಿದ್ದರು.- - - -14ಕೆಡಿವಿಜಿ38ಃ:
ದಾವಣಗೆರೆಯಲ್ಲಿ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಅಧ್ಯಕ್ಷತೆಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ನಡೆಯಿತು.