ಪದವಿ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ:ಎಂ. ಪುಟ್ಟಸ್ವಾಮಿ

| Published : May 25 2024, 12:55 AM IST

ಸಾರಾಂಶ

ಇಂದಿನ ಯುವ ಸಮೂಹ ಪದವಿ ನಂತರ ಸ್ನಾತಕೋತ್ತರ ಪದವಿಯನ್ನು ಪಡೆದು ಸಂಶೋಧನೆಯನ್ನು ಮಾಡಿ, ಈ ದೇಶದ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಬೇಕು. ಜೊತೆಗೆ ನಿಮ್ಮ ತಂದೆ ತಾಯಿ ಹಾಗೂ ಊರಿಗೆ ಒಳ್ಳೆಯ ಕೀರ್ತಿಯನ್ನು ತರಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿಯೊಬ್ಬ ವಿದ್ಯಾರ್ಥಿಯು ಪದವಿ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ದಿ ಇನ್ಸಿಟಿಟ್ಯೂಟ್‌ ಆಫ್‌ ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷ ಎಂ. ಪುಟ್ಟಸ್ವಾಮಿ ತಿಳಿಸಿದರು.

ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಪದವಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯು ಪದವಿ ಪಡೆದು ಸಮಾಜದ ಏಳಿಗೆಗೆ ಶ್ರಮಿಸಬೇಕು. ಸಮಸಮಾಜ ನಿರ್ಮಾಣದಲ್ಲಿ ನಿಮ್ಮೆಲ್ಲರ ಪಾತ್ರ ಅತೀ ಮುಖ್ಯ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸುವತಾಗಲಿ ಎಂದು ಆಶಿಸಿದರು.

ಟ್ರಸ್ಟ್ ಕಾರ್ಯದರ್ಶಿ ಕುಬೇರ್‌ ಪಿ. ಗೌಡ ಮಾತನಾಡಿ, ಇಂದಿನ ಯುವ ಸಮೂಹ ಪದವಿ ನಂತರ ಸ್ನಾತಕೋತ್ತರ ಪದವಿಯನ್ನು ಪಡೆದು ಸಂಶೋಧನೆಯನ್ನು ಮಾಡಿ, ಈ ದೇಶದ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಬೇಕು. ಜೊತೆಗೆ ನಿಮ್ಮ ತಂದೆ ತಾಯಿ ಹಾಗೂ ಊರಿಗೆ ಒಳ್ಳೆಯ ಕೀರ್ತಿಯನ್ನು ತರಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಪಿ. ಗೀತಾಂಜಲಿ ಮಾತನಾಡಿ, ಪದವಿಯ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಅನಾವರಣಗೊಳಿಸಿ ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ದೇಶದ ಉನ್ನತ ಹುದ್ದೆಗಳನ್ನು ಪಡೆಯಲು ತಾವು ಪ್ರಯತ್ನಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಮಹದೇವಸ್ವಾಮಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸುವ ಮೂಲಕ ಶ್ರದ್ಧೆಯಿಂದ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಮ್ಯಾನೇಜಿಂಗ್‌ಟ್ರಸ್ಟಿ ಎಸ್‌. ಪ್ರಭಾ ಪುಟ್ಟಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಪದವಿ ಪತ್ರ ವಿತರಿಸಿದರು. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಟಿ. ರಮೇಶ್‌ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕಿ ಎಸ್‌. ಮಂಜುಳಾ ನಿರೂಪಿಸಿದರು. ವಿದ್ಯಾರ್ಥಿನಿ ಖುಷಿ ನಾರಾಯಣದಾಸ್‌ ವಂದಿಸಿದರು.