ಸಾರಾಂಶ
ಸರ್ಕಾರದ ಆದೇಶದಂತೆ ಕನ್ನಡವನ್ನು ಆಧ್ಯತೆಯಾಗಿ ನಾಮಫಲಕಗಳಲ್ಲಿ ಬಳಸಬೇಕು ಇಲ್ಲವಾದಲ್ಲಿ ಕಟ್ಟುನಿಟ್ಟಿನ ಶಿಸ್ತು ಕ್ರಮ
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ನಗರಸಭೆ ವ್ಯಾಪ್ತಿಗೆ ಬರುವ ಸುಮಾರು 12ಸಾವಿರ ಮಳಿಗೆಗಳ ಮೇಲೆ ಇದೇ ಫೆ.29ರ ಒಳಗಾಗಿ ಕಡ್ಡಾಯವಾಗಿ ನಾಮಫಲಕದ ಶೇ. 60ರಷ್ಟು ಸ್ಥಳದಲ್ಲಿ ಕನ್ನಡ ಭಾಷೆಯಲ್ಲಿಯೇ ಬರೆಯಿಸಬೇಕು ಎಂದು ನಗರಸಭೆ ಆಯುಕ್ತ ಶಿವರಾಜ ರಾಠೋಡ ತಿಳಿಸಿದ್ದಾರೆ.ಈ ಕುರಿತಂತೆ ಸೋಮವಾರ ಅಂಗಡಿ ಮುಗ್ಗಟ್ಟುಗಳ, ವ್ಯಾಪಾರಸ್ಥರ ಸಂಘದ ಪ್ರಮುಖರ ಸಭೆ ನಡೆಸಿದ್ದು, ಸರ್ಕಾರದ ಆದೇಶದಂತೆ ಕನ್ನಡವನ್ನು ಆಧ್ಯತೆಯಾಗಿ ನಾಮಫಲಕಗಳಲ್ಲಿ ಬಳಸಬೇಕು ಇಲ್ಲವಾದಲ್ಲಿ ಕಟ್ಟುನಿಟ್ಟಿನ ಶಿಸ್ತು ಕ್ರಮವನ್ನು ಜರುಗಿಸಲಾಗುವದು ಎಂದು ತಿಳಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 12ಸಾವಿರ ವ್ಯಾಪಾರಿ ಅಂಗಡಿಗಳು ಬರುತ್ತಿದ್ದು ಅವುಗಳಿಗೆಲ್ಲ ಶೇ. 60ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ಬರೆಯಿಸಬೇಕು ಎಂದು ಸೂಚಿಸಿ ಫೆ. 27ರ ಸಂಜೆಯೊಳಗೆ ನೋಟಿಸ್ ತಲುಪಿಸಲಾಗುತ್ತದೆ ಎಂದು ಶಿವರಾಜ ರಾಠೋಡ್ ತಿಳಿಸಿದ್ದಾರೆ.ಎರಡು ದಿನಗಳಲ್ಲಿ ಹತ್ತಾರು ಸಾವಿರ ಅಂಗಡಿಗಳ ನಾಮಫಲಕ ಬದಲು..?:
ಇನ್ನು ಹಲವಾರು ವರ್ಷಗಳಿಂದ ಕನ್ನಡ ನಾಮಫಕಗಳನ್ನು ಅಳವಡಿಸಿಕೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡ ಪರ ಸಂಘಟನೆಗಳು ಗೋಗರೆದರೂ ಕೇಳಿಸಿಕೊಳ್ಳದ ಅಂಗಡಿ ಮುಂಗಟ್ಟುಗಳು ಈಗಿನ ಸರ್ಕಾರದ ಆದೇಶ, ನಗರಸಭೆ ಸೂಚನೆಯನ್ನು ಎಷ್ಟರ ಮಟ್ಟಿಗೆ ಪಾಲಿಸಲಿವೆ. ಕೇವಲ ಒಂದೆಡು ದಿನಗಳ ಗಡುವಿನಲ್ಲಿ ಸಾವಿರಾರು ಅಂಗಡಿಗಳು ಶೇ. 60ರಷ್ಟು ಕನ್ನಡ ಭಾಷೆಯನ್ನು ಬಳಸಿ ನಾಮಫಲಕ ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುವದನ್ನು ಕಾದು ನೋಡಬೇಕಿದೆ.