ತಿಮ್ಮಾಪುರ ನಡೆಯಿಂದ ಬೇಸತ್ತು ಸಾಂಗ್ಲಿಕರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

| Published : Aug 29 2024, 12:49 AM IST

ಸಾರಾಂಶ

ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನಡೆಯಿಂದ ಬೇಸತ್ತು ಮುಧೋಳ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಧರೆಪ್ಪ ಸಾಂಗ್ಲಿಕರ ತಿಳಿಸಿದ್ದಾರೆ.

ಮಹಾಲಿಂಗಪುರ: ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನಡೆಯಿಂದ ಬೇಸತ್ತು ಮುಧೋಳ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಧರೆಪ್ಪ ಸಾಂಗ್ಲಿಕರ ತಿಳಿಸಿದ್ದಾರೆ.

ಮುಧೋಳ ತಾಲೂಕಿನ ಸಮೀಪದ ರನ್ನ ಬೆಳಗಲಿ ಪಟ್ಟಣದವರಾದ ಇವರು, ಸೋಮವಾರ ಪ್ರದೇಶ ಕಾಂಗ್ರೆಸ್ ಕಮಿಟಿಗೆ ಬರೆದ ಪತ್ರದಲ್ಲಿ ಮುಧೋಳ ಮತ ಕ್ಷೇತ್ರದಲ್ಲಿ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಮರೀಚಿಕೆಯಾಗಿತ್ತು. ಇಂತಹ ಸಂದರ್ಭ 2021ರಲ್ಲಿ ಮುಧೋಳ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿಯಾಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಪ್ರಾಮಾಣಿಕ ಕೆಲಸ ಮಾಡಿ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಲಿ ಸಚಿವರಾದ ಆರ್ ಬಿ. ತಿಮ್ಮಾಪುರ ಅವರನ್ನು ಆರಿಸಿ ತರಲಾಯಿತು. ಚುನಾವಣಾಯಿತರಾದ ನಂತರ ಸಚಿವರ ಸರ್ವಾಧಿಕಾರಿ ಧೋರಣೆ ಮತ್ತು ದುರ್ವರ್ತನೆ ಮಿತಿ ಮೀರಿ ಹೋಗಿ, ಜನಸಾಮಾನ್ಯರು, ಮುಖಂಡರು ಹಾಗೂ ಕಾರ್ಯಕರ್ತರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ಇವರು ಆಡಳಿತ ತಮ್ಮ ಮನೆಗೆ ಮಾತ್ರ ಸೀಮಿತಗೊಳಿಸಿಕೊಡಂತಾಗಿದೆ. ಈ ಧೋರಣೆಯಿಂದಲೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಮುಧೋಳ ಮತಕ್ಷೇತ್ರದಿಂದ ಹೆಚ್ಚಿನ ಮತಗಳು ಬಿಜೆಪಿ ಪಾಲಾಗಿ ಗೆಲುವು ಸಾಧಿಸಬೇಕಾದ ಕಾಂಗ್ರೆಸ್ ಅಭ್ಯರ್ಥಿ ಸೋಲುವಂತಾಗಿದ್ದು ಇದಕ್ಕೆ ನೇರ ಹೊಣೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಎಂದು ಆರೋಪ ಮಾಡಿದ್ದಾರೆ.

ಜಿಲ್ಲಾ ಲಿಂಗಾಯತ, ಪಂಚಮಸಾಲಿ ಮತ್ತು ಮುಧೋಳ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷನಾದ ನನ್ನ ಜೊತೆಯೂ ಸರಿಯಾಗಿ ವರ್ತಿಸದೇ ಜನಸಾಮಾನ್ಯರ ಆಶೋತ್ತರಗಳಿಗೆ ನನ್ನಿಂದ ಸ್ಪಂದನೆಯಾಗುತ್ತಿಲ್ಲವೆಂದು ಮನನೊಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಹಂತದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಮಾಹಿತಿ ಇರುವುದಿಲ್ಲ.