ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಶನಿವಾರ ಸರ್ಕಾರದ ವಿವಿಧ ಇಲಾಖೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸುವ ಮೂಲಕ ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಮಹಿಳಾ ಸಾಧಕಿರನ್ನು ಸನ್ಮಾನಿಸಲಾಯಿತು.ಮಹಿಳಾ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ, ಕಾರ್ಯಗಾರ, ಸಂಗೀತ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳಾ ದಿನಾಚರಣೆ ಮೆರಗನ್ನು ಹೆಚ್ಚಿಸಲಾಯಿತು.
ನಗರದ ಸ್ತ್ರೀ ಜಾಗೃತಿ ಕನ್ನಡ ಮಾಸಪತ್ರಿಕೆಯು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಆರ್‌ಎಸ್‌ಎಸ್‌ನ ಮಧ್ಯಕ್ಷೇತ್ರ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಭಾರತೀಯ ಸಂಸ್ಕೃತಿಗೆ ಸಂಸ್ಕಾರವೇ ಮೂಲವಾಗಿದೆ. ಪುರಾತನ ಕಾಲದಿಂದಲೂ ಸಂಸ್ಕಾರಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ ಎಂದರು.ಇನ್ನೂ ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರದ ಅಗತ್ಯತೆಯ ಪ್ರಸ್ತುತತೆ ಹಾಗೂ ಭಾರತೀಯತೆಯಲ್ಲಿ ಸಂಸ್ಕಾರ ಮತ್ತು ಮಹಿಳೆ ಎಂಬ ವಿಷಯದ ಕುರಿತು ಸಂಸ್ಕಾರ ಭಾರತೀಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಎಂ.ಎ.ರಾಮಚಂದ್ರ ಉಪನ್ಯಾಸ ನೀಡಿದರು.
ಸಮಾಜಸೇವಕಿ ಅನುರಾಧ ವೆಂಕಟೇಶ್ ಮಾತನಾಡಿ, ಮಕ್ಕಳಿಗೆ ದೇಶಾಭಿಮಾನ ಬೆಳೆಸಬೇಕು ಎಂದರು. ಈ ವೇಳೆ ಡಾ.ಗಂಗಾಂಬಿಕಾ ಅಕ್ಕ ಅವರಿಗೆ ಡಾ.ಎಸ್.ಜಿ.ಸುಶೀಲಮ್ಮ ಸೇವಾ ಪ್ರಶಸ್ತಿ, ಕೆ.ಶಾಂತಕುಮಾರಿ ಅವರಿಗೆ ಗುಣಸಾಗರಿ ನಾಗರಾಜು ದತ್ತಿ ಪ್ರಶಸ್ತಿ ಹಾಗೂ ಡಾ.ಜಿ.ವೈ.ಪದ್ಮಾನಾಗರಾಜು ಅವರಿಗೆ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ, ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ, ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ನಾಗೇಂದ್ರ ಎಫ್. ಹೊನ್ನಳ್ಳಿ ಇದ್ದರು.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ:ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದಿಂದ ನಗರದ ಕಾನಿಷ್ಕ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ಅದರ ಅಧ್ಯಕ್ಷ ಡಾ.ಎಂ ವೆಂಕಟಸ್ವಾಮಿ ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಪುರುಷ ಮತ್ತು ಮಹಿಳೆ ಸಮಾಜದ 2 ಕಣ್ಣುಗಳಿದಂತೆ. ಧರ್ಮ, ದೇವರ ಹೆಸರಲ್ಲಿ ನಡೆಯುವ ಮೂಢನಂಬಿಕೆ ಬಿಟ್ಟು ಶಿಕ್ಷಣವಂತರಾಗಬೇಕು. ಸಂವಿಧಾನ ಮಹಿಳೆಯರಿಗೆ ಮತದಾನ, ಸಮಾನ ಹಕ್ಕು, ಕರ್ತವ್ಯಗಳನ್ನು ನೀಡಿದೆ ಎಂದರು.
ಡಾ.ಎಂ.ವೆಂಕಟಸ್ವಾಮಿ ಮಾತನಾಡಿದರು. ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜದೇವಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಮಾಜ ಸೇವಕಿ ನಾಗರತ್ನ, ಆರ್‌ಪಿಐ ಬೆಂಗಳೂರು ಜಿಲ್ಲಾ ಅಧ್ಯಕ್ಷೆ ಮಂಜುಳಗೋಪಿಇದ್ದರು.ಕಲಾಪ್ರೇಮಿ ಫೌಂಡೇಷನ್ ಮಲ್ಲೇಶ್ವರ ಸೇವಾ ಸದನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿಶೇಷ ಸಂಜೆ ಕಾರ್ಯಕ್ರಮ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ವಿದುಷಿ ಸಂಗೀತ ಕಲಾಭೂಷಣ ಮಾಲತಿ ಸಿಂಗಲಾಚಾರ್ ಆಗಮಿಸಿದ್ದರು. ಗಾಯಕರಾದ ಅರ್ಚನಾ, ಸಮನ್ವಿ, ದೀಪಿಕಾ ಶ್ರೀನಿವಾಸ್ (ಮೃದಂಗ), ಸಿ.ವಿ.ಶ್ರುತಿ (ವಯೋಲಿನ್) ಸೇರಿದಂತೆ ಮೊದಲಾದವರಿದ್ದರು.
ಮೆಡಿಕಲ್ ಅಸೋಸಿಯೇಶ್‌ನಿಂದ ಜಾಥಾ (ಫೋಟೋ ಇದೆ)ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನಿಂದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಪ್ತಗಿರಿ ವಿವಿಯ ಉಪ ಕುಲಪತಿ ಡಾ.ಜಯಂತಿ, ಮಹಿಳೆಯರಿಗೆ ಪುರಾತನ ಕಾಲದಿಂದ ಮಹತ್ವದ ಸ್ಥಾನವಿದ್ದು, ಮಹಿಳೆ 2 ಮುಖಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಪುರುಷನಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದಾಳೆ. ಕುಟುಂಬದಿಂದ ಸಮಾಜದ ನಿರ್ವಹಣೆವರೆಗೂ ತನ್ನದೇ ಆದ ಸ್ಥಾನಮಾನ ಹೊಂದಿದ್ದಾಳೆ ಎಂದರು.
ಐಎಂಎ ಅಧ್ಯಕ್ಷ ಡಾ.ವೀರಭದ್ರಪ್ಪ ಚಿನ್ನಿವಾಲರ್, ಕಾರ್ಯದರ್ಶಿ ಡಾ.ಸೂರಿರಾಜು ವಿ, ಹಿರಿಯ ಉಪಾಧ್ಯಕ್ಷ ಟಿ.ಎನ್.ಮರಿಗೌಡ, ಡಾ.ವಿಜಯಸಾರಥ ಇದ್ದರು. ಮಹಿಳಾ ದಿನಾಚರಣೆಯ ಹಮ್ಮಿಕೊಂಡಿದ್ದ ಜಾಥಾದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ನರ್ಸಿಂಗ್, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.ಸುರ್ವೆ ಕಲ್ಬರಲ್ ಅಕಾಡೆಮಿಯಿಂದ ಸಂಭ್ರಮ
ನಗರದ ನಯನ ಸಭಾಂಗಣದಲ್ಲಿ ಸುರ್ವೆ ಕಲ್ಬರಲ್ ಅಕಾಡೆಮಿಯಿಂದ 72ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೊಪ್ಪಳದ ಮಂಡಲಗೇರಿ ಶ್ರೀ ಭುವನೇಶ್ವರಿ ಮಹಿಳಾ ಜಾನಪದ ಕಲಾ ಸಂಘದಿಂದ ಸೋಬಾನೆ ಪದ, ಸಾಯಿ ಆರ್ಟ್ ಇಂಟರ್ ನ್ಯಾಷನಲ್ 30ಕ್ಕೂ ಅಧಿಕ ಕಲಾವಿದರಿಂದ ನೃತ್ಯ ರೂಪ ಪ್ರದರ್ಶನ ನಡೆಯಿತು. ಡಾಡಿ ಬೇಡದ ಬುತ್ತಿ, ಸಂತಮ್ಮಣ್ಣ ಮತ್ತು ರೈಟ್ ಸಹೋದರರು ಸೇರಿದಂತೆ ವಿವಿಧ ಕೃತಿ ಬಿಡುಗಡೆ ಮತ್ತು ಭಾರತೀಯ ಮಹಿಳೆ ಅಂದು- ಇಂದು ಉಪನ್ಯಾಸ, ಸಂಜೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಲಾಯಿತು.